ಬೆಂಗಳೂರು: 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮರುಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
ಮುಖ್ಯಮಂತ್ರಿಗಳ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದ “ಮರುಸಿಂಚನ” ಕಾರ್ಯಕ್ರಮವನ್ನು 17 ಜಿಲ್ಲೆಗಳ 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು, ಈಗಾಗಲೇ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿ ಕಲಿಕಾ ನ್ಯೂನತೆಗಳನ್ನು ಸರಿಪಡಿಸುವುದು, ತರಗತಿಗನುಗುಣವಾದ ಕಲಿಕಾ ಫಲಗಳನ್ನು ಸಾಧಿಸಲು ಹಿಂದಿನ ತರಗತಿಗಳ ಕಲಿಕಾ ಫಲಗಳನ್ನು ವೃದ್ಧಿಸುವುದು, ಪ್ರಮಾಣೀಕೃತ ಮೌಲ್ಯಮಾಪನವನ್ನು ಕೈಗೊಳ್ಳುವುದು ಹಾಗೂ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಗುಣಾತ್ಮಕವಾಗಿ ಸಾಧಿಸುವುದಾಗಿದೆ.
ಇದರ ಮುಂದುವರಿದ ಭಾಗವಾಗಿ, ಮರುಸಿಂಚನ ಕಾರ್ಯಕ್ರಮವನ್ನು 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕಿದೆ. ಸದರಿ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಿದ್ಧತೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಗಮನದಲ್ಲಿರಿಸಿ ಈ ಕೆಳಕಂಡಂತೆ ಹಮ್ಮಿಕೊಳ್ಳಲಾಗುವುದು.
ಸದರಿ ಸಾಲಿನಲ್ಲಿ ಬೇಸ್ಟೈನ್ ಅಸೆಸ್‌ಮೆಂಟ್ ಅನ್ನು(ನೈದಾನಿಕ ಮೌಲ್ಯಮಾಪನ) ನಡೆಸಲಾಗುವುದಿಲ್ಲ. ಸರಬರಾಜು ಮಾಡಿರುವ ಬೇಸೈನ್ ಅಸೆಸ್‌ಮೆಂಟ್ ಹಾಳೆಗಳ ಬಂಡಲ್ ಗಳನ್ನು ತೆರೆಯದೇ, ಅದನ್ನು ಸುರಕ್ಷಿತವಾಗಿ, ಗೌಪ್ಯತೆಯನ್ನು ಕಾಪಾಡಿಕೊಂಡು, ಮುಂದಿನ ಸಾಲಿನಲ್ಲಿ ಬಳಸುವುದು.
ಈ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷೆ, ಇಂಗ್ಲೀಷ್ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ” ಮತ್ತು ಶಿಕ್ಷಕರಿಗೆ “ಶಿಕ್ಷಕರ ಕೈಪಿಡಿ” ಗಳನ್ನು ಪ್ರತಿ ವಿಷಯಕ್ಕೆ ನೀಡಲಾಗಿದೆ.
ಪ್ರತಿ ವಿಷಯದ ಬುನಾದಿ ಹಂತದ 10 ಅಧ್ಯಾಯಗಳನ್ನು ತರಗತಿಗಳಲ್ಲಿ ತೊಡಗಿಸಿಕೊಳ್ಳದೇ, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ನಿರ್ವಹಿಸುವಂತೆ ಸೂಚಿಸುವುದು. ವಿದ್ಯಾರ್ಥಿಗಳು ಬುನಾದಿ ಹಂತದ ಅಧ್ಯಾಯಗಳನ್ನು ಗಳಿಸಿರುವ ಬಗ್ಗೆ “ವಿದ್ಯಾರ್ಥಿಗಳ ಅಭ್ಯಾಸ ಪುಸ್ತಕ”ದ ಹಾಳೆಗಳನ್ನು ವಿದ್ಯಾರ್ಥಿಗಳು ನಿರ್ವಹಿಸಿರುವ ಬಗ್ಗೆ ವಿಷಯ ಶಿಕ್ಷಕರು ದಿನಾಂಕ: 15.01.2025ರೊಳಗೆ ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸುವುದು.
:31.12.2024 80 26.02.2025 ಬೆಂಬಲಿತ ಕಲಿಕಾ ಹಂತವನ್ನು ಶಾಲಾ ತರಗತಿಗಳಲ್ಲಿ ಹಮ್ಮಿಕೊಳ್ಳುವುದು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಪೂರಕವಾದ ಅಧ್ಯಾಯಗಳನ್ನು ಮಾತ್ರ ಈ ಹಂತದಲ್ಲಿ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಡಿಸುವುದು. ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಲಾಗಿದೆ.
ಮರುಸಿಂಚನ ವೇಳಾಪಟ್ಟಿಯಲ್ಲಿ ನಿಗದಿಪಡಿಸಿರುವಂತೆ ವಾರದಲ್ಲಿ ಭಾಷೆಗಳಿಗೆ 3 ಅವಧಿಗಳು ಮತ್ತು ಕೋರ್ ವಿಷಯಗಳಿಗೆ 2 ಅವಧಿಗಳಂತೆ ನಿರ್ವಹಿಸಲು ಶಾಲಾ ಮುಖ್ಯಸ್ಥರು ಹಾಗೂ ವಿಷಯ ಶಿಕ್ಷಕರಿಗೆ ಸೂಚಿಸುವುದು.
ವಿದ್ಯಾರ್ಥಿಗಳು ಮರುಸಿಂಚನ ಅಭ್ಯಾಸ ಪುಸ್ತಕದ ಚಟುವಟಿಕೆಗಳನ್ನು ನಿರ್ವಹಿಸಿರುವ ಬಗ್ಗೆ ವಿಷಯ ಶಿಕ್ಷಕರು ಖಾತ್ರಿ ಪಡಿಸಿಕೊಂಡು ಅವರಿಗೆ ಹಿಮ್ಮಾಹಿತಿಯನ್ನು ನೀಡುವಂತೆ ಸೂಚಿಸುವುದು ಎಂದು ತಿಳಿಸಲಾಗಿದೆ.