ಬೆಳಗಾವಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ.) ಸಿಬ್ಬಂದಿ ಸೇವೆಯನ್ನು ಕಾಯಂ ಮಾಡುವ ಪ್ರಸ್ತಾಪ ಇಲ್ಲವೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರು ವಿಷಯ ಪ್ರಸ್ತಾಪಿಸಿ, ಗ್ರಾಮೀಣ ಆರೋಗ್ಯ ವ್ಯವಸ್ಥೆಯಲ್ಲಿ ಎನ್.ಹೆಚ್.ಎಂ. ನೌಕರರ ಅವಲಂಬನೆ ಹೆಚ್ಚಾಗಿದ್ದು, ಅವರ ಸೇವೆ ಕಾಯಂ ಮಾಡುವಂತೆ ಹೋರಾಟ ನಡೆಸಿದ್ದಾರೆ. ಅವರ ಬೇಡಿಕೆ ಈಡೇರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್, 2023 -24ನೇ ಸಾಲಿನಲ್ಲಿ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಪ್ರತಿವರ್ಷ ಶೇಕಡ 5ರಷ್ಟು ವೇತನ ಹೆಚ್ಚಿಸಲಾಗುತ್ತಿದೆ. ನೇಮಕಾತಿ ಸಂದರ್ಭದಲ್ಲಿ ಎನ್.ಹೆಚ್.ಎಂ. ಸಿಬ್ಬಂದಿಗೆ ಶೇಕಡ 2ರಷ್ಟು ಕೃಪಾಂಕ ನೀಡಲಾಗುತ್ತಿದೆ. ಅವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಸೇವೆ ಕಾಯಂ ಮಾಡುವ ಪ್ರಸ್ತಾಪವಿಲ್ಲ. ಎನ್.ಹೆಚ್.ಎಂ. ಸಿಬ್ಬಂದಿಗೆ ಕಲ್ಪಿಸಲಾಗುತ್ತಿದೆ. ಜೊತೆಗೆ 10 ಲಕ್ಷ ರೂ. ವಿಮೆ ನೀಡುವ ಆದೇಶ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ.