ಬೆಂಗಳೂರು: ರಾಜ್ಯದಲ್ಲಿ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ಆಸ್ತಿ ನೋಂದಣಿ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ನಿತ್ಯ ಸರಾಸರಿ 90ರಿಂದ 100 ಕೋಟಿ ರೂಪಾಯಿ ಸಂಗ್ರಹವಾಗುತ್ತಿದ್ದ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಪ್ರಮಾಣ ಸರಾಸರಿ 45 ರಿಂದ 50 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
2024- 25 ನೇ ಸಾಲಿನಲ್ಲಿ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಪ್ರತಿ ತಿಂಗಳು ಸರಾಸರಿ 2000 ಕೋಟಿ ರೂ.ಗಳಂತೆ ಶುಲ್ಕ ಸಂಗ್ರಹಣೆಯಾಗಿದೆ. ಅಕ್ಟೋಬರ್ 29 ರಿಂದ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದ್ದು, ನವೆಂಬರ್ ತಿಂಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ 1265 ಕೋಟಿ ರೂಪಾಯಿಗೆ ಕುಸಿತ ಕಂಡಿದೆ. ಕಳೆದ ವರ್ಷದ ನವೆಂಬರ್ ಗಿಂತ 200 ಕೋಟಿ ರೂಪಾಯಿಯಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಕುಸಿತವಾಗಿದ್ದು, ಪ್ರಸಕ್ತ ಸಾಲಿನ 26 ಸಾವಿರ ಕೋಟಿ ರೂಪಾಯಿ ಆದಾಯ ಗುರಿ ತಲುಪಲು ನಾಲ್ಕು ತಿಂಗಳಲ್ಲಿ 10855 ಕೋಟಿ ರೂಪಾಯಿ ಸಂಗ್ರಹಿಸಬೇಕಿದೆ.
ಅಗತ್ಯ ಪೂರ್ವ ಸಿದ್ಧತೆ ಇಲ್ಲದೆ ಇ- ಸ್ವತ್ತು, ಇ- ಖಾತಾ, ಕಾವೇರಿ -2 ತಂತ್ರಾಂಶ ಜೋಡಣೆ ಮಾಡಿ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಅಕ್ರಮಗಳ ತಡೆಯಲು ಇದು ಸೂಕ್ತ ವ್ಯವಸ್ಥೆಯಾಗಿದೆ. ಆದರೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತು ಸೂಕ್ತ ಪೂರ್ವ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಕಡ್ಡಾಯ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.