ಬೆಳಗಾವಿ: ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದು, ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್ ಸಿ ಉಮಾಶ್ರೀ, ಸಿ.ಟಿ.ರವಿ ಆ ರೀತಿ ಪದ ಬಳಕೆ ಮಾಡಿದ್ದು ನಿಜ ನಾವೇ ಕೇಳಿಸಿಕೊಂಡಿದ್ದೇವೆ ಎಂದು ಕಿಡಿಕಾರಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಉಮಾಶ್ರೀ, ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರೆಲ್ಲರೂ ಪರಿಷತ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನಚಕಮಕಿ ನಡೆದಿದೆ. ಈ ವೇಳೆ ಬಿಜೆಪಿ ಸದಸ್ಯ ಸಿಟಿ.ರವಿ ರಾಹುಲ್ ಗಾಂಧಿಯವರನ್ನು ನಿಂದಿಸಿ ಮಾತನಾಡಿದ್ದಾರೆ. ಇದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿ, ನಿಮ್ಮ ಮೇಲೂ ಆಕ್ಸಿಡೆಂಟ್ ಆರೋಪವಿದೆ. ಹಾಗಂತ ನಿಮ್ಮನ್ನು ಕೊಲೆಗೆಡುಕ ಎಂದು ಕರೆಯಬಹುದಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿಟಿ ರವಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಕೆಟ್ಟ ಪದದಿಂದ ನಿಂದಿಸಿದ್ದಾರೆ ಎಂದು ತಿಳಿಸಿದರು.
ಸಿ.ಟಿ.ರವಿ ಆ ಪದ ಬಳಕೆ ಮಾಡಿದ್ದು ನಿಜ. ನಾವೆಲ್ಲರೂ ಕೇಳಿಸಿಕೊಂಡಿದ್ದೇವೆ. ಅಂಥಹ ಪದ ಬಳಕೆ ಯಾವ ಹೆಣ್ಣುಮಗಳಿಗೆ ನೋವಾಗಲ್ಲ? ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದಕ್ಕೆ ನಾವೆಲ್ಲರೂ ಸಾಕ್ಷಿ ಇದ್ದೇವೆ. ಅದಕ್ಕೆ ಸಭಾಪತಿಗಳಿಗೆ ದೂರು ನೀಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಟಿ.ರವಿ ಏನೇ ಸಮಜಾಯಿಷಿ ನೀಡಲಿ, ಅವರು ಅವಾಚ್ಯ ಪದ ಬಳಕೆ ಮಾಡಿದ್ದು ನಿಜ. ಅವರ ವಿರುದ್ಧ ಕ್ರಮವಾಗಬೇಕು. ಪರಿಷತ್ ಸದಸ್ಯ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದರು.