ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 14ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ದಾಖಲೆಯ 38.80 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಕಕ್ಷಿದಾರರಿಗೆ 2248 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವಾ ಪದಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ವಿ. ಕಾಮೇಶ್ವರರಾವ್ ತಿಳಿಸಿದ್ದಾರೆ.
ಅದಾಲತ್ ನಲ್ಲಿ ಒಟ್ಟು 1581 ವೈವಾಹಿಕ ಪ್ರಕರಣ ಇತ್ಯರ್ಥ ಪಡಿಸಲಾಗಿದ್ದು, 307 ದಂಪತಿ ರಾಜೀ ಸಂಧಾನದಿಂದ ಪುನಃ ಒಟ್ಟಿಗೆ ಜೀವನ ನಡೆಸಲು ಮುಂದಾಗಿದ್ದಾರೆ. ಅದಾಲತ್ ಗಾಗಿ ಒಟ್ಟು 1019 ನ್ಯಾಯ ಪೀಠಗಳನ್ನು ರಚಿಸಲಾಗಿತ್ತು. ಇವುಗಳಲ್ಲಿ ಹೈಕೋರ್ಟ್ ಪೀಠಗಳಲ್ಲಿದ್ದ 1151, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿದ್ದ 2,44,038 ಪ್ರಕರಣಗಳು ಸೇರಿ ಒಟ್ಟು 38,80,881 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
3311 ವಿಭಾಗದಾವೆ, 5168 ಮೋಟಾರು ವಾಹನ ಅಪಘಾತ ಪ್ರಕರಣ ಇತ್ಯರ್ಥಪಡಿಸಲಾಗಿದ್ದು, 260 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. ಒಟ್ಟು 11,262 ಚೆಕ್ ಬೌನ್ಸ್ ಪ್ರಕರಣಗಳು, 597 ಭೂಸ್ವಾಧೀನ ಪ್ರಕರಣ, 1004 ಎವಿಸಿ ಪ್ರಕರಣ, 3432 ಅಮಲ್ದಾರಿ ಪ್ರಕರಣ, 82 ರೇರಾ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಶ್ರೀನಿವಾಸ ವರ್ಸಸ್ ಕಾಂಡೀಡ್ ಬಿಲ್ಡರ್ ಪ್ರಕರಣದಲ್ಲಿ 23.70 ಕೋಟಿ ರೂ.ಗೆ ಇತ್ಯರ್ಥ ಪಡಿಸಲಾಗಿದೆ. ಹಿರಿಯ ನಾಗರಿಕರಿಗೆ ಸೇರಿದ 1921 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.