ಬೆಳಗಾವಿ: ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಕುರಿತಾಗಿ ಚರ್ಚೆ ನಡೆಸಲು ಡಿಸೆಂಬರ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ಶಾಸಕರ ಸಭೆ ಕರೆದಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಡಿಸೆಂಬರ್ 21ರಂದು ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಪಂಚಮಸಾಲಿ ಸಮಾಜದ ಶಾಸಕರನ್ನು ಹೊರತುಪಡಿಸಿ ಸಮುದಾಯದ ಯಾವುದೇ ಮುಖಂಡರನ್ನು ಸಭೆಗೆ ಆಹ್ವಾನಿಸಿಲ್ಲ.
ಪಂಚಮಸಾಲಿ ಸಮಾಜದ ಮೀಸಲಾತಿ ಬೇಡಿಕೆ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯ ಏನಿದೆ? ಹಿಂದುಳಿದ ವರ್ಗಗಳ ಪ್ರವರ್ಗ 2ಎ ಗೆ ಪಂಚಮಸಾಲಿ ಸಮುದಾಯವನ್ನು ಯಾವ ಕಾರಣಕ್ಕೆ ಸೇರಿಸಲು ಸಾಧ್ಯವಿಲ್ಲ? ಸೇರ್ಪಡೆ ಮಾಡಲು ಕಾನೂನಿನ ತೊಡಕು, ಬೆಳಗಾವಿಯಲ್ಲಿ ನಡೆದ ಲಾಠಿ ಚಾರ್ಜ್ ವಿಚಾರ, ಮೀಸಲಾತಿಗೆ ಪರ್ಯಾಯವಾಗಿ ಯಾವ ಕ್ರಮ ಕೈಗೊಳ್ಳಬಹುದು ಎಂಬುದು ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಪಂಚಮಸಾಲಿ ಸಮುದಾಯದ ಸರ್ವ ಪಕ್ಷಗಳ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.