ಬೆಳಗಾವಿ: ಕಂದಾಯ ಮತ್ತು ಸರ್ವೆ ಇಲಾಖೆಗಳ ಹಳೆಯ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡೇಟಾಬೇಸ್ ನಲ್ಲಿ ಸಂರಕ್ಷಿಸಲು ಭೂ ಸುರಕ್ಷೆ ಯೋಜನೆ ಜಾರಿಗೊಳಿಸಲಾಗಿದೆ. 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಭೂಸುರಕ್ಷೆ ಯೋಜನೆಯನ್ನು ಉಳಿದ 210 ತಾಲ್ಲೂಕುಗಳಿಗೂ ವಿಸ್ತರಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಸುನಿಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಮೂಲ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 31 ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದೆ. 2025ರ ಡಿಸೆಂಬರ್ ವೇಳೆಗೆ ಉಳಿದ ತಾಲೂಕುಗಳಲ್ಲಿಯೂ ದಾಖಲೆಗಳ ಸ್ಕ್ಯಾನಿಂಗ್ ಆಗಲಿದ್ದು, ಜನರಿಗೆ ಆನ್ಲೈನ್ ನಲ್ಲಿಯೂ ದಾಖಲೆಗಳು ಲಭ್ಯವಾಗಲಿವೆ. ಪ್ರಮುಖ ದಾಖಲೆಗಳ ಮೂಲ ಪ್ರತಿಯನ್ನು ತಾಲೂಕು ಮಟ್ಟದಲ್ಲಿ ವೈಜ್ಞಾನಿಕವಾಗಿ ಸಂರಕ್ಷಿಸಲು ತಾಲೂಕಿಗೆ ಒಂದು ಕಾಂಪ್ಯಾಕ್ಟರ್ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.