ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ನೌಕಾ ಹಡಗು ಡಿಕ್ಕಿ ಹೊಡೆದು 13 ಮಂದಿ ಸಾವನ್ನಪ್ಪಿದ್ದಾರೆ.
ಮುಂಬೈ ಬಂದರಿನಲ್ಲಿ ಇಂಜಿನ್ ಟ್ರಯಲ್ಸ್ ನಡೆಸುತ್ತಿದ್ದಾಗ ಘಟನೆ ನಡೆದಿದೆ. ಭಾರತೀಯ ನೌಕಾಪಡೆಯ ನೌಕೆ ನಿಯಂತ್ರಣ ಕಳೆದುಕೊಂಡು ಪ್ಯಾಸೆಂಜರ್ ಬೋಟ್ ಗೆ ಡಿಕ್ಕಿ ಹೊಡೆದಿದೆ. ಪ್ರಯಾಣಿಕರ ಬೋಟ್ ಗೆ ಡಿಕ್ಕಿ ಹೊಡೆದು ದೋಣಿ ಮಗುಚಿದೆ. ಸಮುದ್ರದಲ್ಲಿ ಮುಳುಗಿ 13 ಜನ ಸಾವನ್ನಪ್ಪಿದ್ದಾರೆ. 101 ಜನರನ್ನು ರಕ್ಷಣೆ ಮಾಡಲಾಗಿದೆ. 4 ಸೇನಾ ಹೆಲಿಕಾಪ್ಟರ್ ಗಳು, 11 ನೌಕಾ ಕ್ರಾಫ್ಟ್ ಗಳು, 1 ಕೋಸ್ಟ್ ಗಾರ್ಡ್ ನೌಕೆಯಿಂದ ಕಾರ್ಯಾಚರಣೆ ನಡೆಸಲಾಗಿದೆ.
ದೋಣಿ ಮಗುಚಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ., ಮೃತರಲ್ಲಿ ಹತ್ತು ಪ್ರಯಾಣಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ. ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ದೋಣಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.