ಕೋಲಾರ: ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ ಸರ್ವೆಗೆ ಜಿಲ್ಲಾಡಳಿತ ದಿನಾಂಕ ನಿಗದಿಪಡಿಸಿದೆ.
ಕೋಲಾರ ಅರಣ್ಯ ವಿಭಾಗದಲ್ಲಿನ, ಜಿನಗುಲಕುಂಟೆ ಅರಣ್ಯ ಪ್ರದೇಶದಲ್ಲಿ ರಮೇಶ್ ಕುಮಾರ್ 61.39 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 20ರಂದು ಜಂಟಿ ಸರ್ವೆ ನಡೆಯಲಿದೆ. ಅಂದು ಸೂಕ್ತ ದಾಖಲೆಗಳೊಂದಿಗೆ ಸ್ಥಳಕ್ಕೆ ಹಾಜರಾಗುವಂತೆ ರಮೇಶ್ ಕುಮಾರ್ ಗೆ ಸೂಚಿಸಲಾಗಿದೆ.
ಬೆಂಗಳೂರು ಪ್ರಾದೇಶಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಈ ಕುರಿತಾಗಿ ಪತ್ರ ಬರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಕಾರ್ಯ ಕೈಗೊಳ್ಳಲು ತಿಳಿಸಿದ ಹಿನ್ನೆಲೆಯಲ್ಲಿ ಸರ್ವೆ ಕೈಗೊಳ್ಳಲಾಗಿದೆ.
ಅರಣ್ಯ ಪ್ರದೇಶದಲ್ಲಿ 61.39 ಎಕರೆ ಒತ್ತುವರಿಯಾಗಿರುವುದನ್ನು ಜಂಟಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಿ ವರದಿ ನೀಡಲು ರಾಜ್ಯ ಅರಣ್ಯ ಅಧಿಕಾರಿಗಳಿಗೆ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ವೈಪರಿತ್ಯ ಮಂತ್ರಾಲಯ ಸೂಚಿಸಿದೆ.