ಬೆಂಗಳೂರು: ಇಂಜಿನಿಯರಿಂಗ್ ಪದವಿ ನಂತರ ಸ್ನಾತಕೋತರ ವ್ಯಾಸಂಗ ಎಂಟೆಕ್ ಪ್ರವೇಶಕ್ಕೆ ಆಗುತ್ತಿರುವ ವಿಳಂಬ ತಪ್ಪಿಸಲು ಮುಂದಿನ ವರ್ಷದಿಂದ ಎಂಟೆಕ್ ಪ್ರವೇಶಕ್ಕೆ ಪ್ರತ್ಯೇಕ ಪಿಜಿ ಸಿಇಟಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕ್ರಮ ಕೈಗೊಂಡಿದೆ.
ಸರ್ಕಾರಿ ಮತ್ತು ಖಾಸಗಿ ಮಹಾವಿದ್ಯಾಲಯಗಳಲ್ಲಿ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಪ್ರವೇಶಕ್ಕೆ ಕಕೆಇಎ ವತಿಯಿಂದ ಪಿಜಿ ಸಿಇಟಿ ನಡೆಸಲಾಗುವುದು. ಇಂಜಿನಿಯರಿಂಗ್ ಪದವಿ ಫಲಿತಾಂಶವನ್ನು ಸಾಮಾನ್ಯವಾಗಿ ವಿಟಿಯು ಮೇ -ಜೂನ್ ವೇಳೆಗೆ ಪ್ರಕಟಿಸುತ್ತದೆ. ಉಳಿದ ಎರಡು ಕೋರ್ಸ್ ಗಳಿಗೆ ಸಿಇಟಿ ಆಧಾರದ ಮೇಲೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯದ 35 -40 ವಿವಿ ಪದವಿ ಫಲಿತಾಂಶ ಬೇಕಾಗುತ್ತದೆ. ಈ ವರ್ಷದ ಡಿಸೆಂಬರ್ ನಲ್ಲಿ ಕೆಲವುವು ವಿವಿಗಳು ಫಲಿತಾಂಶ ನೀಡಿದೆ.
ಇದರಿಂದ ಪಿಜಿ ಸಿಇಟಿ ಫಲಿತಾಂಶ ಬಿಡುಗಡೆ ಮತ್ತು ಕೌನ್ಸೆಲಿಂಗ್ ವಿಳಂಬವಾಗುತ್ತಿದೆ. ಹೀಗಾಗಿ ಎಂಟೆಕ್ ಪ್ರವೇಶಕ್ಕೆ ಪ್ರತ್ಯೇಕ ಪಿಜಿ ಸಿಇಟಿ ನಡೆಸಲು ಶಿಕ್ಷಣ ಇಲಾಖೆ ಮತ್ತು ವಿಟಿಯು ಜೊತೆ ಚರ್ಚೆ ನಡೆಸಲಾಗಿದ್ದು, ಒಪ್ಪಿಗೆ ದೊರೆತಿದೆ. ಮುಂದಿನ ವರ್ಷದಿಂದಲೇ ಪ್ರತ್ಯೇಕ ಪಿಜಿ ಸಿಇಟಿ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.