ಬೆಳಗಾವಿ: ರಾಜ್ಯದಲ್ಲಿ ಕೆ.ಐ.ಎ.ಡಿ.ಬಿ. ವತಿಯಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ಪರಿಹಾರವನ್ನು ಸಂಬಂಧಪಟ್ಟ ಖಾತೆದಾರರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆರ್.ಟಿ.ಜಿ. ಎಸ್ ಮುಖಾಂತರ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರವು ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಕೆಐಎಡಿ ಕಾಯ್ದೆ, 1996ರನ್ವಯ ಭೂಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಈ ಕಾಯ್ದೆಯನ್ವಯ ರೈತರನ್ನು ಅವರ ಜಮೀನಿನಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಲ್ಲಿ ಸಹಭಾಗಿತ್ವ ನೀಡಲು ಅವಕಾಶವಿರುವುದಿಲ್ಲ ಎಂದರು.
ರಾಜ್ಯದಲ್ಲಿ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳುವಾಗ ಅಭಿವೃದ್ಧಿ ಪಡಿಸಲಾದ ನಿವೇಶನಗಳನ್ನು ಹಂಚಿಕೆ ಮಾಡುವ ರೀತಿಯಲ್ಲೇ, ಕೆಐಎಡಿಬಿ ಯಿಂದ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಕೈಗಾರಿಕಾ ಪ್ರದೇಶದ ಜಮೀನುಗಳಿಗೆ ಭೂಪರಿಹಾರದ ಬದಲಾಗಿ ಪ್ರತಿ ಎಕರೆ ಜಮೀನಿಗೆ 10,781 ಚದರಡಿ ಅಭಿವೃದ್ಧಿ ಪಡಿಸಿದ ವಿಸ್ತೀರ್ಣವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.