ದೆಹಲಿಯ ಪೆಟ್ ಫೆಡ್ ಇಂಡಿಯಾ ಕಾರ್ಯಕ್ರಮದಲ್ಲಿ ಒಂದು ವಿಶೇಷ ನಾಯಿ ಎಲ್ಲರ ಗಮನ ಸೆಳೆಯಿತು. ಈ ನಾಯಿಯ ಬೆಲೆ ಕೇಳಿದರೆ ಅಚ್ಚರಿಯಾಗುವಂತಿದೆ.ಇದರ ಬೆಲೆ ಸುಮಾರು ಮಹೀಂದ್ರಾ ಎಕ್ಸ್ಯುವಿ ಅಥವಾ ಹೋಂಡಾ ಅಮೇಜ್ ಕಾರಿನ ಬೆಲೆಗೆ ಸಮವಾಗಿದೆ.
ಅಂದರೆ, ಕನಿಷ್ಠ 8 ಲಕ್ಷ ರೂಪಾಯಿ ಇದ್ದರೆ ಮಾತ್ರ ಈ ನಾಯಿಯನ್ನು ಖರೀದಿಸಲು ಸಾಧ್ಯ. ಅಷ್ಟೇ ಅಲ್ಲ, ಈ ನಾಯಿಗಾಗಿ ಪ್ರತಿ ತಿಂಗಳು ಖರ್ಚು ಮಾಡುವ ಹಣ ಮಧ್ಯಮ ವರ್ಗದ ಕುಟುಂಬದ ಸಂಬಳಕ್ಕೆ ಸಮ (ಶ್ವಾನದ ಮೇಲಿನ ತಿಂಗಳ ವೆಚ್ಚ ಬರೋಬ್ಬರಿ 60 ಸಾವಿರ ರೂಪಾಯಿ}. ಈ ನಾಯಿ ಅನುಭವಿಸುವ ಐಷಾರಾಮಿ ಜೀವನ ಶೈಲಿಯನ್ನು ಕೇಳಿದರೆ ನೀವು ಇನ್ನೂ ಆಶ್ಚರ್ಯ ಪಡುತ್ತೀರಿ. ಬೇಸಿಗೆಯಲ್ಲಿ ಈ ನಾಯಿಗೆ ಎಸಿ ಮತ್ತು ಕೂಲರ್ ಎರಡೂ ಬೇಕು !
ಉತ್ತರ ಪ್ರದೇಶದ ಬುಲಂದ್ಶಹರ್ನ ನಿವಾಸಿ ವಿನಾಯಕ ಪ್ರತಾಪ್ ಸಿಂಗ್ ಈ ನಾಯಿಯನ್ನು ದೆಹಲಿಯಲ್ಲಿ ನಡೆದ ಪೆಟ್ ಫೆಡ್ ಇಂಡಿಯಾ ಕಾರ್ಯಕ್ರಮಕ್ಕೆ ತಂದಿದ್ದರು. ನೋಡಲು ಗಂಭೀರವಾಗಿ ಕಾಣುವ ಈ ನಾಯಿ, ಸ್ವಭಾವತಃ ಅಷ್ಟೇ ಸೌಮ್ಯ. ಬೇಗನೆ ಜನರೊಂದಿಗೆ ಬೆರೆಯುತ್ತದೆ ಎನ್ನಲಾಗಿದೆ.
ವಿನಾಯಕ್ ಪ್ರತಾಪ್ ಸಿಂಗ್ ಅವರು ಇದು ಕಕೇಶಿಯನ್ ಶೆಫರ್ಡ್ ನಾಯಿ ಎಂದು ಮಾಹಿತಿ ನೀಡಿದ್ದು, ಇದನ್ನು ಕಕೇಶಿಯನ್ ಓವ್ಚಾರ್ಕಾ ಎಂದೂ ಕರೆಯುತ್ತಾರೆ. ಅದರ ಹೆಸರು ಥಾರ್. ವಿನಾಯಕ್ ಇದನ್ನು ಅಮೆರಿಕದಿಂದ ತಂದಿದ್ದಾಗಿ ಉಲ್ಲೇಖಿಸಿದ್ದಾರೆ.
ಅವರ ಸಹೋದರ ಈ ತಳಿಯ ನಾಯಿಗಳ ಸಂಪೂರ್ಣ ಕುಟುಂಬವನ್ನು ಅವರಿಗೆ ನೀಡಿದ್ದಾರೆ, ಅದರಲ್ಲಿ ಒಂದು ಹೆಣ್ಣು ನಾಯಿಯೂ ಸೇರಿದೆ. ಅವರು ಹೆಣ್ಣ ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಪ್ರದರ್ಶನಕ್ಕೆ ಗಂಡು ನಾಯಿಯನ್ನು ಮಾತ್ರ ತಂದಿದ್ದರು. ಥಾರ್ 72 ಕೆಜಿ ತೂಕ ಮತ್ತು 75 ಸೆಂ.ಮೀ ಎತ್ತರವಿದೆ.