ಬೆಂಗಳೂರು: ಬೆಂಗಳೂರಿನ 83 ವರ್ಷದ ವೃದ್ಧೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗಿದೆ.
ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದೀರಿ ಎಂದು ಮುಂಬೈ ಪೊಲೀಸರ ಹೆಸರಿನಲ್ಲಿ ಆರೋಪಿಗಳು ವೃದ್ಧೆಗೆ ಕರೆ ಮಾಡಿ ವಂಚಿಸಿದ್ದಾರೆ. ನಿಮ್ಮ ಮತ್ತೊಂದು ನಂಬರ್ ನಿಂದ ಮನಿ ಲ್ಯಾಂಡರಿಂಗ್ ನಡೆಯುತ್ತಿದೆ ಎಂದು ಹೆದರಿಸಿದ್ದಾರೆ. ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ ಎಂದು ಬೆದರಿಸಿ ಬಳಿಕ ವೃದ್ಧೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡಿದ್ದಾರೆ.
ಆರೋಪಿಗಳ ಬೆದರಿಕೆಗೆ ಹೆದರಿದ ವೃದ್ಧೆ ಅವರು ಹೇಳಿದ ಖಾತೆಗೆ ಹಣ ಹಾಕಿದ್ದಾರೆ. ಹಂತ ಹಂತವಾಗಿ 32 ಲಕ್ಷ ರೂ., 50 ಲಕ್ಷ ರೂ. ಸೇರಿ ಒಟ್ಟು 1.24 ಕೋಟಿ ರೂಪಾಯಿ ಹಣ ಸೈಬರ್ ವಂಚಕರ ಖಾತೆಗೆ ವರ್ಗಾವಣೆಯಾಗಿದೆ. ಆರೋಪಿಗಳು ಮತ್ತೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಬಳಿಕ ವಂಚನೆಗೊಳಗಾಗಿರುವುದನ್ನು ತಿಳಿದು ಸೈಬರ್ ಪೋಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದು ಎರಡು ತಿಂಗಳ ನಂತರ ವೃದ್ಧೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.