ಬೆಂಗಳೂರು: ಸಾರಿಗೆ ಇಲಾಖೆಗೆ ಇನ್ನು ಮುಂದೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಲು ಚಿಂತನೆ ನಡೆದಿದೆ.
ಗುತ್ತಿಗೆ ಆಧಾರದಲ್ಲಿ ಸಾರಿಗೆ ಇಲಾಖೆಗೆ ನೇಮಕಗೊಂಡ ನೌಕರರು ಕನಿಷ್ಠ ವೇತನ, ಪಿಎಫ್, ಇಎಸ್ಐ ಸೇರಿ ಯಾವುದೇ ಸೌಲಭ್ಯ ಪಡೆಯದೇ ವಂಚಿಸುವಂತಹ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದು, ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಕೆಪಿಎಸ್ಸಿ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲು ಸಾರಿಗೆ ಇಲಾಖೆ ಮುಂದಾಗಿದೆ.
ಸಾರಿಗೆ ಇಲಾಖೆಯಲ್ಲಿ ಗ್ರೂಪ್ ಎ ಮತ್ತು ಡಿ ವರೆಗಿನ ಹುದ್ದೆಗಳಲ್ಲಿ ಶೇಕಡ 52.68ರಷ್ಟು ಖಾಲಿ ಹುದ್ದೆಗಳಿವೆ. ಒತ್ತಡದಿಂದ ಶೇಕಡ 48 ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುವಂತಾಗಿದೆ. ಆರ್ಥಿಕ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿಗೆ ಅನುಮತಿ ಕೊಟ್ಟಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ.
ಶೇಕಡ 60ರಷ್ಟು ಹುದ್ದೆಗಳು ಖಾಲಿ ಉಳಿದಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ. ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ವಿಚಾರದಲ್ಲಿ ಕೆಲವು ಗುತ್ತಿಗೆದಾರರು ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಕೆಪಿಎಸ್ಸಿ ಮೂಲಕ ನೇಮಿಸಿಕೊಳ್ಳಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.