ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಮಧ್ಯರಾತ್ರಿ 12:50 ರವರೆಗೆ ಕಲಾಪ ನಡೆಸಲಾಗಿದೆ. ಬೆಳಗ್ಗೆ 10.30 ಕ್ಕೆ ಆರಂಭವಾದ ಕಲಾಪ ತಡರಾತ್ರಿವರೆಗೂ ನಡೆಸಿದ್ದು, ಒಟ್ಟು 14 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ.
ಬೆಳಗಾವಿಯಲ್ಲಿ 10 ದಿನಗಳ ಕಾಲ ಅಧಿವೇಶನ ನಿಗದಿಯಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ 9 ದಿನಕ್ಕೆ ಮೊಟಕುಗೊಂಡಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಮಂಗಳವಾರ ಸಂತಾಪ ಸೂಚನೆಗೆ ಸೀಮಿತವಾಗಿತ್ತು. ಬುಧವಾರ ಸರ್ಕಾರಿ ರಜೆ ಘೋಷಣೆಯ ಕಾರಣ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ 8 ದಿನಕ್ಕೆ ಇಳಿಕೆಯಾಗಿದ್ದು, ವಿಧಾನಸಭೆಯ ಕಲಾಪ ಪೂರ್ಣಗೊಳಿಸಲು ಕಳೆದ ಗುರುವಾರ ರಾತ್ರಿ 10:15 ರವರೆಗೆ ಕಲಾಪ ನಡೆಸಲಾಗಿತ್ತು.
ಸೋಮವಾರ ಮಧ್ಯರಾತ್ರಿ 12:30ವರೆಗೂ ಕಲಾಪ ನಡೆಸಲಾಗಿದೆ. ಮಧ್ಯಾಹ್ನ ಭೋಜನ ವಿರಾಮ ಮತ್ತು ಸಂಜೆ ಕಲಾಪದಲ್ಲಿ ಗಲಾಟೆಯಾದ ನಂತರದಿಂದ 30 ನಿಮಿಷ ಕಲಾಪ ಮುಂದೂಡಿದ್ದನ್ನು ಬಿಟ್ಟರೆ ಒಟ್ಟು 12 ಗಂಟೆವರೆಗೆ ಕಲಾಪ ನಡೆಸಲಾಗಿದೆ. ಈ ಮೂಲಕ ವಿಧಾನಸಭೆ ಕಲಾಪವನ್ನು ಒಂದು ದಿನದಲ್ಲಿ 14 ಗಂಟೆಗೂ ಹೆಚ್ಚು ಕಾಲ ನಡೆಸುವ ಮೂಲಕ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ದಾಖಲೆ ನಿರ್ಮಿಸಿದ್ದಾರೆ.