ನವದೆಹಲಿ: ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ಘೋಷಿಸುವುದನ್ನು ಬಿಟ್ಟು ಪಕ್ಷದ ಸಂಘಟನೆ ವೈಫಲ್ಯ ಒಪ್ಪಿಕೊಳ್ಳುವ ಎದೆಗಾರಿಕೆ ಪ್ರದರ್ಶಿಸಿ ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ ಬೆನ್ನಲ್ಲೇ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಕಾಂಗ್ರೆಸ್ ಆರೋಪಿಸಿದ ಇವಿಎಂ ವಿಶ್ವಾಸಾರ್ಹತೆ ಚರ್ಚೆಯಿಂದ ಟಿಎಂಸಿ ದೂರವಿದೆ. ಈ ಕುರಿತಾಗಿ ಕಾಂಗ್ರೆಸ್ ಪುರಾವೆ ತೋರಿಸಲಿ ಎಂದು ಇವಿಎಂ ಟ್ಯಾಂಪರಿಂಗ್ ಆರೋಪ ತಿರಸ್ಕರಿಸಿದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ್ದು, ಚುನಾವಣಾ ಆಯೋಗಕ್ಕೆ ಪುರಾವೆ ಎಂದು ಒದಗಿಸಲಿ ಎಂದು ಸಲಹೆ ನೀಡಿದ್ದಾರೆ. ಇವಿಎಂ ದೋಷದ ಬಗ್ಗೆ ಪ್ರಶ್ನಿಸುವವರು ಅವುಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತಿಳಿಸಬೇಕು ಎಂದು ಹೇಳಿದ್ದಾರೆ.
ಇವಿಎಂ ರಾಂಡಮೈಸೇಶನ್, ಅಣಕು ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಯಲ್ಲಿ ಸರಿಯಾದ ವಿಧಾನಗಳನ್ನು ಅನುಸರಿಸಿದರೆ, ಟ್ಯಾಂಪರಿಂಗ್ ಆರೋಪಗಳಿಗೆ ಅವಕಾಶವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.