ಬೆಳಗಾವಿ: ವಿಧಾನಸಭೆಯಲ್ಲಿ ಕಲಾಪದ ಆರಂಭದಲ್ಲೇ ಆಡಳಿತ ಹಾಗೂ ವಿಪಕ್ಷ ಸದಸ್ಯರ ಗದ್ದಲ-ಕೋಲಾಹಲಕ್ಕೆ ಕಾರಣವಾದ ಘಟನೆ ನಡೆಯಿತು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸ್ಪೀಕರ್ ಯು.ಟಿ.ಖಾದರ್ ಅವಕಾಶ ನೀಡುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್ ವಕ್ಫ್ ವಿಚಾರ ಪ್ರಸ್ತಾಪಿಸಿದರು. ಅಲ್ಲದೇ ವಿಜಯೇಂದ್ರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ನಾನು ಆರೋಪ ಮಾಡಿಲ್ಲ, ಅನ್ವರ್ ಮಾಣಿಪ್ಪಾಡಿ ಆರೋಪ ಮಾಡಿದ್ದಾರೆ. ಅದನ್ನೇ ನಾನು ಹೇಳಿದ್ದೇನೆ ಅಷ್ಟೇ ಎಂದರು. ಪ್ರಿಯಾಂಕ್ ಖರ್ಗೆ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಕೇಳಿದರು. ಚರ್ಚೆಗೆ ಅವಕಾಶ ಕೊಡದ ಸ್ಪೀಕರ್, ಈ ಬಗ್ಗೆ ವಿಜಯೇಂದ್ರ ಸ್ಪಷ್ಟನೆ ನೀಡಲಿ ಎಂದರು.
ಈ ವೇಳೆ ವಿಜಯೇಂದ್ರ, ನನ್ನ ವಿರುದ್ಧ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯನವರಿಗೆಸಿಬಿಐ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ಸಿಬಿಐ ತನಿಖೆ ಮಾಡಲಿ ಎಂದರು. ಈ ವೇಳೆ ಸಚಿವ ಕೃಷ್ಣಬೈರೇಗೌಡ ರಾಜಕೀಯ ಭಾಷಣ ಬೇಡ ಎಂದರು. ಇದೇ ವೇಳೆ ವಿಜಯೇಂದ್ರ ಸಿಎಂ ಸಿದ್ದರಾಮಯನವರಿಗೆ ಪರಮಾಧಿಕಾರವಿದೆ. ಅನ್ವರ್ ಹೇಳಿಕೆ ಬಗ್ಗೆಯೂ ಸಿಬಿಐ ತನಿಖೆಗೆ ನೀಡಲಿ ಎಂದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಗುರುತರ ಆರೋಪವಿದೆ. ಮುಡಾ ಹಗರಣವನ್ನೂ ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.
ವಿಜಯೇಂದ್ರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ-ಕೋಲಾಹಲ ಆರಂಭವಾಯಿತು. ವಿಜಯೇಂದ್ರ ವಿರುದ್ಧದ 150 ಕೋಟಿ ಆಮಿಷ ಆರೋಪ ಸಿಬಿಐಗೆ ನೀಡಲಿ ಎಂದು ಕಾಂಗ್ರೆಸ್ ಆಗ್ರಹಿಸಿದರೆ, ಬಿಜೆಪಿಯವರು ಮುಡಾ ಹಗರಣ ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಖಾದರ್, ವಿಜಯೇಂದ್ರ ಅವರಿಂದ ಸ್ಪಷ್ಟನೆ ಸಿಕ್ಕಿದೆ. ಈಗ ಉತ್ತರ ಕರ್ನಾಟಕ ವಿಷಯಗಳ ಬಗ್ಗೆ ಚರ್ಚೆಯಾಗಲಿ ಎಂದು ಕೋಲಾಹಲಕ್ಕೆ ಬ್ರೇಕ್ ಹಾಕಿದರು.