ಪತ್ತನಂತಿಟ್ಟ: ಅನು ಮತ್ತು ನಿಖಿಲ್ ಮದುವೆ ಕೇವಲ ಹದಿನೈದು ದಿನಗಳ ಹಿಂದಷ್ಟೇ ನಡೆದಿತ್ತು. ಸಹಸ್ರಾರು ಕನಸುಗಳೊಂದಿಗೆ ಹೊಸ ಜೀವನ ಆರಂಭಿಸಿದ್ದ ಯುವ ಜೋಡಿಯ ಬದುಕು ಕಾರು ಅಪಘಾತದ ರೂಪದಲ್ಲಿ ಬಂದ ಹಠಾತ್ ಮತ್ತು ಅನಿರೀಕ್ಷಿತ ಸಾವು ಕಿತ್ತುಕೊಂಡಿದೆ. ಅವರ ಮದುವೆಯ ನಂತರ, ಕೆನಡಾದಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಹೋಗುವ ಮೊದಲು ಇಬ್ಬರೂ ತಮ್ಮ ಹನಿಮೂನ್‌ಗಾಗಿ ಮಲೇಷ್ಯಾಕ್ಕೆ ಹೋಗಿದ್ದರು. ತಮ್ಮ ಮಧುಚಂದ್ರದ ಸಿಹಿ ನೆನಪುಗಳೊಂದಿಗೆ ಮನೆಗೆ ಹಿಂದಿರುಗಿದ ಅವರು ತಮ್ಮ ಪ್ರೀತಿಪಾತ್ರರ ಜೊತೆ ವಿಮಾನ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಪತ್ತನಂತಿಟ್ಟದ ಕೂಡಲ್ ಮುರಿಂಜಕಲ್ ಎಂಬಲ್ಲಿ ಪುನಲೂರು-ಮುವಾಟ್ಟುಪುಳ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ 4 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಲ್ಲಸ್ಸೆರಿ ಮೂಲದ ಅನು ಮತ್ತು ನಿಖಿಲ್ ಸಾವನ್ನಪ್ಪಿದ್ದಾರೆ. ದಂಪತಿಗಳು ನವೆಂಬರ್ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಅವರ ಮನೆಯಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಿಖಿಲ್ ಅವರ ತಂದೆ ಮಥಾಯ್ ಈಪೆನ್ ಮತ್ತು ಅನು ಅವರ ತಂದೆ ಬಿಜು ಪಿ ಜಾರ್ಜ್ ಕೂಡ ಸಾವನ್ನಪ್ಪಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಆಂಧ್ರಪ್ರದೇಶದಿಂದ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಬಹಳ ಪ್ರಯತ್ನದ ನಂತರ ಕಾರನ್ನು ಕಟ್ ಮಾಡಿ ಒಳಗಿದ್ದವರನ್ನು ರಕ್ಷಿಸಲಾಯಿತು. ಭಾರೀ ಶಬ್ದ ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಮೊದಲು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಿಜು ಕಾರು ಚಲಾಯಿಸುತ್ತಿದ್ದು, ಅಪಘಾತ ಸಂಭವಿಸಿದ ವೇಳೆ ನಿದ್ರೆಗೆ ಜಾರಿರಬಹುದು ಎಂದು ಶಂಕಿಸಲಾಗಿದೆ.