ಶ್ರೀನಗರ: ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ದೂಷಿಸುವುದನ್ನು ಮೊದಲು ಬಿಡಿ. ನಿಮ್ಮ ಪಕ್ಷದ ಸಂಘಟನೆ ವೈಫಲ್ಯ ಒಪ್ಪಿಕೊಳ್ಳುವ ಎದೆಗಾರಿಕೆ ಪ್ರದರ್ಶಿಸಿ ಎಂದು ಜಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದಲ್ಲಿ ನಾಯಕತ್ವ ವಿಚಾರವಾಗಿ ಬಡಿದಾಟ ನಡೆಯುತ್ತಿರುವ ಹೊತ್ತಲ್ಲೇ ಮೈತ್ರಿಕೂಟದ ಪಕ್ಷವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಕಾಂಗ್ರೆಸ್ ನೀತಿ ನಿಲುವುಗಳನ್ನು ಬಲವಾಗಿ ಟೀಕಿಸಿದ್ದಾರೆ.
ಇವಿಎಂ ಮೇಲೆ ನಂಬಿಕೆ ಇಲ್ಲದಿದ್ದರೆ ಮುಂದಿನ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದಾಗ ಸಂಭ್ರಮಿಸುವ ರಾಜಕೀಯ ಪಕ್ಷಗಳು ಸೋತಾಗಲೂ ಅದೇ ರೀತಿಯ ಉತ್ಸಾಹ ತೋರಿಸಬೇಕು. ಗೆದ್ದಾಗ ಕಾಣಿಸದ ಇವಿಎಂ ದೋಷ ಸೋತಾಗ ಮಾತ್ರವೇಕೆ ಕಾಣುತ್ತದೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 100 ಕ್ಷೇತ್ರ ಗೆದ್ದ ಸಂದರ್ಭದಲ್ಲಿ ದೊಡ್ಡ ಯುದ್ಧ ಗೆದ್ದವರ ರೀತಿ ಸಂಭ್ರಮಾಚರಣೆ ಮಾಡಿದ್ದವರೇ ಅದೇ ಇವಿಎಂಗಳ ಮೂಲಕ ನಡೆದ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಇವಿಎಂ ದೋಷದ ಬಗ್ಗೆ ಮಾತನಾಡುತ್ತಿದ್ದಾರೆ. ಇವಿಎಂ ಸರಿಯಿಲ್ಲ, ಬ್ಯಾಲೆಟ್ ಪೇಪರ್ ಮರಳಿ ತನ್ನಿ ಎನ್ನುವ ನಿಲುವು ಇಬ್ಬಗೆಯಿಂದ ಕೂಡಿದೆ ಎಂದು ಒಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.