ಚಿತ್ರದುರ್ಗ: ಮೀನು ಹಿಡಿಯಲು ತಾನೇ ಬೀಸಿದ್ದ ಬಲೆಯಲ್ಲಿ ಸಿಲುಕಿ ಮೀನುಗಾರ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ, ಧರ್ಮಪುರ ಸಮೀಪದ ಹೊಸಹಳ್ಳಿ ಗ್ರಾಮದ ಬಳಿ ವೇದಾವತಿ ನದಿ ಬ್ಯಾರೇಜ್ ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಶಿಡ್ಲಯ್ಯನ ಕೋಟೆ ಗ್ರಾಮದ ಎಸ್.ಪಿ. ಶ್ರೀಧರ್(40) ಮೃತಪಟ್ಟ ವ್ಯಕ್ತಿ. ಶನಿವಾರ ಸಂಜೆ ಮೀನು ಹಿಡಿಯಲು 500 ಮೀಟರ್ ವಿಸ್ತೀರ್ಣದ ಬಲೆಯನ್ನು ನೀರಿಗೆ ಹಾಕಿದ ಶ್ರೀಧರ್ ಭಾನುವಾರ ನಸುಕಿನಜಾವ ಬಲೆ ಎಳೆಯಲು ಹೋಗಿದ್ದಾರೆ. ಬಲೆಯಲ್ಲಿ 20 ರಿಂದ 25 ಕೆಜಿ ಮೀನು ಸಿಲುಕಿದ್ದು, ಬಲೆ ಎಳೆಯುವಾಗ ಅದರಲ್ಲಿ ಸಿಲುಕಿಕೊಂಡು ನೀರಿನಿಂದ ಹೊರಬರಲಾರದೆ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾರ್ಯಾಚರಣೆ ಬಳಿಕ ಮೃತದೇಹ ಹೊರತೆಗೆಯಲಾಗಿದೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.