ರಾಮನಗರ: ರಾಮನಗರ ತಾಲೂಕಿನ ಮಾದಾಪುರ ತಿಮ್ಮೇಗೌಡನದೊಡ್ಡಿಗೇಟ್ ಬಳಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೃದ್ಧೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ 40 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದಾರೆ.
ಬುರುಗನಮರದೊಡ್ಡಿ ನಿವಾಸಿ ಹನುಮಕ್ಕ(76) ಸರ ಕಳೆದುಕೊಂಡವರು. ಹರಿಸಂದ್ರ ಗ್ರಾಮದಲ್ಲಿರುವ ತಮ್ಮ ಜಮೀನಿಗೆ ಹೋಗಿ ಸ್ವಗ್ರಾಮಕ್ಕೆ ಹಿಂತಿರುಗಲು ಶನಿವಾರ ಸಂಜೆ ಮಾದಾಪುರ ತಿಮ್ಮೇಗೌಡನ ದೊಡ್ಡಿ ಗೇಟ್ ಬಳಿ ನಿಂತಿದ್ದಾಗ ಕಾರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸ್ಥಳದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ವಿಳಾಸ ಕೇಳುವ ನೆಪದಲ್ಲಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿಯಲು ಪ್ರಯತ್ನಿಸಿದ್ದಾರೆ. ವೃದ್ದೆ ಹನುಮಕ್ಕ ಪ್ರತಿರೋಧ ತೋರಿದಾಗ ಕೆಳಗೆ ಬೀಳಿಸಿ ಹಲ್ಲೆ ಮಾಡಿ ಎರಡು ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.