“ಡಿಜಿಟಲ್ ಅರೆಸ್ಟ್ ಹಗರಣ” ಎಂದು ಕರೆಯಲ್ಪಡುವ ದೊಡ್ಡ ಮಟ್ಟದ ವಂಚನಾ ವಿಧಾನಕ್ಕೆ ದೇಶಾದ್ಯಂತ ಹಲವಾರು ಜನರು ಬಲಿಯಾಗಿದ್ದಾರಲ್ಲದೇ ಗಣನೀಯ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ, ಜಾಗೃತರಾದ ಭೋಪಾಲ್ ಯುವಕನೊಬ್ಬ ತನ್ನನ್ನು ಗುರಿಯಾಗಿಸಲು ಯತ್ನಿಸಿದ ವಂಚಕರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಅಲ್ಲದೇ ಆತನ ಘಟನೆಯಲ್ಲಿ ಭಾಗಿಯಾಗಿರುವ ನಕಲಿ ಪೊಲೀಸ್ ಅಧಿಕಾರಿಯೊಂದಿಗಿನ ವೀಡಿಯೊ ಕರೆ ರೆಕಾರ್ಡ್ ಮಾಡಿದ್ದು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೋಪಾಲ್ ನ ಗ್ರಾಫಿಕ್ಸ್ ಡಿಸೈನರ್ ಅನಿರುದ್ಧ್ ಅವರಿಗೆ ಶುಕ್ರವಾರದಂದು ಖಾಸಗಿ ಟೆಲಿಕಾಂ ಕಂಪನಿಯೊಂದರ ಅಧಿಕಾರಿ ಎಂದು ಹೇಳಿಕೊಂಡು ಯಾರೋ ಕರೆ ಮಾಡಿದ್ದಾರೆ. ಅನಿರುದ್ಧ್ ಅವರ ಫೋನ್ ಸಂಖ್ಯೆಯನ್ನು, ಸೆಲೆಬ್ರಿಟಿಗಳು ಸೇರಿದಂತೆ ಜನರನ್ನು ಸುಲಿಗೆ ಮಾಡಲು ಬಳಸಲಾಗುತ್ತಿದೆ ಎಂದು ಕರೆ ಮಾಡಿದವರು ಆರೋಪಿಸಿದ್ದು, ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದ್ದಾರೆ.
ಆದರೆ ಇಂತದೊಂದು ಹಗರಣದ ಕುರಿತು ಮೊದಲೇ ಮಾಹಿತಿ ಹೊಂದಿದ್ದ ಅನಿರುದ್ಧ್ ಎಚ್ಚರಿಕೆಯಿಂದ ಆತನೊಂದಿಗೆ ಆಟವಾಡಲು ನಿರ್ಧರಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್‌ನಿಂದ ಶೀಘ್ರದಲ್ಲೇ ನಿಮಗೆ ವೀಡಿಯೊ ಕರೆ ಬರುವುದಾಗಿ ಕರೆ ಮಾಡಿದವರು ಎಚ್ಚರಿಸಿದ್ದಾರೆ, ಅಲ್ಲದೇ ಅಲ್ಲಿನ ಹಿರಿಯ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಅನಿರುದ್ಧ್ ಅವರ ಮೊಬೈಲ್ ಫೋನ್‌ಗೆ ವೀಡಿಯೊ ಕರೆ ಬಂದಿದೆ. ಕರೆಯಲ್ಲಿ ಪೊಲೀಸ್ ಅಧಿಕಾರಿಯ ವೇಷ ಧರಿಸಿದ್ದ ಯುವಕನೊಬ್ಬ ಮುಂಬೈ ಕ್ರೈಂ ಬ್ರಾಂಚ್‌ನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
ಈ ನಕಲಿ ಪೊಲೀಸ್ ಅಧಿಕಾರಿ, ಅನಿರುದ್ಧ್ ಅವರ ಮೊಬೈಲ್ ಸಂಖ್ಯೆ ಮತ್ತು ಎಫ್‌ಐಆರ್‌ಗೆ ಸಂಬಂಧಿಸಿದ ದೂರು ಸಂಖ್ಯೆಯನ್ನು ಹೇಳಿದ್ದು, ಅನಿರುದ್ಧ್ ಅವರ ಆಧಾರ್ ಕಾರ್ಡ್ ತೋರಿಸಲು ಕೇಳಿದ್ದಾನೆ, ಈ ಮೂಲಕ ಅವರ ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಅಥವಾ ಅವರು ಯಾವುದೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾನೆ.
ಈ ಹಂತದಲ್ಲಿ, ಅನಿರುದ್ಧ್ ವಂಚಕನನ್ನು ಎದುರಿಸಲು ನಿರ್ಧರಿಸಿದ್ದು, ಸಮವಸ್ತ್ರದಲ್ಲಿದ್ದ ವ್ಯಕ್ತಿಗೆ “ನೀವು ಅಂತಹದನ್ನು ಹೇಗೆ ಪರಿಶೀಲಿಸುತ್ತೀರಿ ? ಇದು ಸಾಕಷ್ಟು ಪ್ರಯತ್ನವನ್ನು ತೆಗೆದುಕೊಳ್ಳಬೇಕಲ್ಲವೇ” ಎಂದು ಪ್ರಶ್ನಿಸಿದ್ದಾರೆ
ಅದಕ್ಕೆ ವಂಚಕ ಉತ್ತರಿಸಿ “ಇದು ಕಠಿಣ ಪರಿಶ್ರಮವನ್ನು ತೆಗೆದುಕೊಳ್ಳುತ್ತದೆ. ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ” ಎಂದಿದ್ದು, ಯಾವಾಗ ಅನಿರುದ್ಧ್ ತನ್ನ ಬಲೆಗೆ ಬೀಳುತ್ತಿಲ್ಲ ಎಂಬುದರ ಅರಿವಾಯಿತೋ ಮೋಸಗಾರನು ಥಟ್ಟನೆ ಕರೆಯನ್ನು ಕಡಿತಗೊಳಿಸಿದ್ದಾನೆ.
ಅಚ್ಚರಿ ಎಂಬಂತೆ ವೀಡಿಯೊ ಕರೆ ಸಂಪರ್ಕ ಕಡಿತಗೊಳಿಸಿದ ನಂತರ, ವಂಚಕ ಅನಿರುದ್ಧ್‌ಗೆ ಸಂದೇಶ ಕಳುಹಿಸಿ “ಹೇಳಿ, ನಾವು ಎಲ್ಲಿ ತಪ್ಪಿದ್ದೇವೆ?” ಎಂದಿದ್ದು, ಅದಕ್ಕೆ ಅನಿರುದ್ಧ್ ವಿನೋದದ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.