ಬೆಂಗಳೂರು: ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಸಮಾಜದ ಮುಖಂಡರಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈ ಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡ ಕೆ.ಎಸ್. ಶಿವರಾಮ್ ಅವರ ವಿರುದ್ಧ ದೂರು ದಾಖಲಾಗಿದೆ. ಲಿಂಗಾಯಿತ ಪಂಚಮಸಾಲಿ ವಕೀಲರ ಪರಿಷತ್ ಸದಸ್ಯೆ ರೇಖಾ ಶಂಭುಲಿಂಗೇಶ್ವರ ಪಟೇಲ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶ್ರೀಗಳನ್ನು ಶಿವರಾಮ್ ನಿಂದಿಸಿದ್ದಾರೆ. 2ಎ ಮೀಸಲಾತಿ ಕೇಳಿ ನಮ್ಮ ಅನ್ನದ ತಟ್ಟೆಗೆ ಕೈ ಹಾಕಬೇಡಿ, ಕೈಹಾಕಿದರೆ ನಿಮ್ಮ ಕೈಯನ್ನು ಕತ್ತರಿಸುತ್ತೇವೆ ಎಂದು ಸ್ವಾಮೀಜಿ ಮತ್ತು ಹೋರಾಟಗಾರರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಸ್ವಾಮೀಜಿಯನ್ನು ಬಿಜೆಪಿ ಏಜೆಂಟ್ ಎಂದು ನಿಂದಿಸಿದ್ದಾರೆ. ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ.