ಶಿವಮೊಗ್ಗ: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ 15,000 ಕೋಟಿ ರೂ. ಬಂಡವಾಳ ತೊಡಗಿಸುವ ಕುರಿತಂತೆ ಯೋಜನಾ ವರದಿ ಸಿದ್ದಪಡಿಸಲು ಕೊಲ್ಕತ್ತಾ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ. ಈ ಸಂಸ್ಥೆ ಶೀಘ್ರವೇ ಕಾರ್ಖಾನೆಗೆ ಭೇಟಿ ನೀಡಲಿದ್ದು, ವರದಿ ಸಿದ್ದಪಡಿಸಲಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಮುಖಂಡ ಮಂಗೋಟೆ ರುದ್ರೇಶ್ ನೇತೃತ್ವದ ಕಾರ್ಮಿಕರ ನಿಯೋಗ ಇತ್ತೀಚೆಗೆ ದೆಹಲಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಭೇಟಿಯ ವೇಳೆ ಹೆಚ್.ಡಿ.ಕೆ., ಭರವಸೆ ನೀಡಿದ್ದು, ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಕೈಬಿಟ್ಟು ಸೂಕ್ತ ಬಂಡವಾಳ ತೊಡಗಿಸುವ ಕುರಿತಾಗಿ ಮನವಿ ಮಾಡಲಾಗಿದ್ದು, ಕಾರ್ಖಾನೆಗೆ 15000 ಕೋಟಿ ರೂ. ಬಂಡವಾಳ ಹೂಡಿಕೆಯ ಚಿಂತನೆ ಇದೆ. ಈ ಕುರಿತ ವರದಿ ಸಿದ್ದಪಡಿಸಲು ಕೊಲ್ಕತ್ತದ ಕಂಪನಿಗೆ ವಹಿಸಲಾಗಿದೆ. ವರದಿ ಪಡೆದು ಯೋಜನೆಯ ಪ್ರಸ್ತಾವವನ್ನು ಸರ್ಕಾರದ ಅನುಮೋದನೆಗೆ ಮಂಡಿಸುವುದಾಗಿ ತಿಳಿಸಿದ್ದಾರೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದ್ದಾರೆ.