ಮದುವೆ ಆಮಂತ್ರಣ ಪತ್ರಿಕೆ ವಿಭಿನ್ನವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇತ್ತೀಚೆಗೆ ಅಸಾಮಾನ್ಯ ವಿನ್ಯಾಸಕ್ಕಾಗಿ ವೆಡ್ಡಿಂಗ್ ಕಾರ್ಡ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ಸ್ವೀಕರಿಸಿದವರು ಮೊದಲು ಗೊಂದಲಕ್ಕೊಳಗಾಗಿದ್ದು ಬಳಿಕ ಅಚ್ಚರಿಪಟ್ಟಿದ್ದಾರೆ. ಮೊದಲ ನೋಟದಲ್ಲಿ ಹಲವರು ಇದನ್ನು ಆಧಾರ್ ಕಾರ್ಡ್ ಎಂದು ತಪ್ಪಾಗಿ ಗ್ರಹಿಸಿದ್ದು, ಕೆಲವು ಕ್ಷಣಗಳ ಬಳಿಕ ಅದು ಮದುವೆಯ ಆಮಂತ್ರಣ ಪತ್ರಿಕೆ ಎಂದು ಅರಿತುಕೊಂಡಿದ್ದಾರೆ.
ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ಧಾರ್ಮಿಕ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಸರಳ ಮದುವೆಯ ಕಾರ್ಡ್ ಗಳು ಕಡಿಮೆಯಾಗುತ್ತಿದ್ದು, ಇಂದು ತಮ್ಮದೇ ಶೈಲಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿಸುತ್ತಿದ್ದಾರೆ. ಈ ಟ್ರೆಂಡ್‌ಗೆ ಇತ್ತೀಚಿನ ಒಂದು ಪ್ರಮುಖ ಉದಾಹರಣೆಯೆಂದರೆ ಮದುವೆಯ ಆಮಂತ್ರಣ ಆಧಾರ್ ಕಾರ್ಡ್‌ನ ನೋಟವನ್ನು ನೀಡುತ್ತಿದ್ದು, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.
ವೈರಲ್ ಚಿತ್ರವನ್ನು ಡಿಕೆ ಸರ್ದಾನ (@dksardana) ಎಂಬವರು ‘X’ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದು, ಇದು ಅಧಿಕೃತ ಆಧಾರ್ ಕಾರ್ಡ್ ಅನ್ನು ಹೋಲುತ್ತದೆ, ಲೇಔಟ್ ಮತ್ತು ಫಾಂಟ್ ಶೈಲಿ ಸಹ ಇದನ್ನೇ ಅನುಕರಿಸಿದ್ದು, ಆದಾಗ್ಯೂ, ಕಾರ್ಡಿನ ಮೇಲ್ಭಾಗದಲ್ಲಿ “ಶುಭ ವಿವಾಹ” ಎಂಬ ಶೀರ್ಷಿಕೆಯಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುತ್ತದೆ.
ಮಧ್ಯಪ್ರದೇಶದ ಪಿಪಾರಿಯಾ ಗ್ರಾಮದ ಪ್ರಹ್ಲಾದ್ ಮತ್ತು ವರ್ಷಾ ಎಂಬ ವಧು-ವರರ ಹೆಸರು ಇದರಲ್ಲಿದ್ದು, ಸಾಮಾನ್ಯ ಆಧಾರ್ ಸಂಖ್ಯೆಯ ಬದಲಿಗೆ, ಕಾರ್ಡ್ ನಲ್ಲಿ ಅವರ ಮದುವೆಯ ದಿನಾಂಕವನ್ನು ಮುದ್ರಿಸಲಾಗಿದೆ ಜೊತೆಗೆ ವಧು – ವರರ ಫೋಟೋಗಳನ್ನು ಕೆಳಗೆ ಹಾಕಲಾಗಿದೆ, ಅಲ್ಲದೇ QR ಕೋಡ್ ಮತ್ತು ಬಾರ್‌ಕೋಡ್ ಸಹ ಇದೆ. ಇದರ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.