ಥಿಯೇಟರ್ ನಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆಯಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಜಾಮೀನು ಮಂಜೂರು ಮಾಡಿದೆ.
ನಿನ್ನೆ ರಾತ್ರಿಯಿಡೀ ಜೈಲಿನಲ್ಲಿ ಕಾಲ ಕಳೆದ ನಟ ಅಲ್ಲು ಅರ್ಜುನ್ ಜಾಮೀನು ಪ್ರಕ್ರಿಯೆ ಪೂರ್ತಿಗೊಳಿಸಿ ಇದೀಗ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಜೈಲಿನ ಹಿಂದಿನ ಗೇಟ್ ನಿಂದ ಅಲ್ಲು ಅರ್ಜುನ್ ರಿಲೀಸ್ ಆಗಿದ್ದಾರೆ.
14 ದಿನಗಳ ನ್ಯಾಯಾಂಗ ಬಂಧನಕ್ಕೀಡಾಗಿದ್ದ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ನಾಂಪಲ್ಲಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದ ಕೆಲವೇ ಗಂಟೆಗಳಲ್ಲಿ ಅಲ್ಲು ಅರ್ಜುನ್ ಗೆ ಜಾಮೀನು ಮಂಜೂರಾಗಿದೆ.
ಪುಷ್ಪ 2 ಚಿತ್ರದ ಪ್ರೀಮಿಯರ್ ಪ್ರದರ್ಶನದ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ (39)ಎಂಬ ಮಹಿಳೆ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಥಿಯೆಟರ್ ಮಾಲೀಕ, ಇಬ್ಬರು ವ್ಯವಸ್ಥಾಪಕರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಕೂಡ ಚಿಕ್ಕಡಪಲ್ಲಿ ಠಾಣೆ ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ನಾಂಪಲ್ಲಿ ಕೋರ್ಟ್ ನಟ ಅಲ್ಲು ಅರ್ಜುನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತ್ತು. ಬಳಿಕ ತೆಲಂಗಾಣ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಜಾಮೀನು ಮಂಜೂರು ಮಾಡಿದೆ.
ಜಾಮೀನು ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಕಳೆದಿದ್ದರು. ಇಂದು ಬೆಳಗ್ಗೆ 6 :30 ರ ಸುಮಾರಿಗೆ ಜೈಲಿನಿಂದ ರಿಲೀಸ್ ಆಗಿದ್ದಾರೆ.