ಪೊಲೀಸರಿಂದಲೇ ನಿರ್ವಹಿಸಲ್ಪಡುತ್ತದೆ ಈ ದೇಗುಲ; ಇಲ್ಲಿ ನಡೆದಿದೆ ಕಳ್ಳತನ…!

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಮುತಲಕ್ಕುಳಂನಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಬುಧವಾರ ಮುಂಜಾನೆ ಕಳ್ಳನೊಬ್ಬ ನುಗ್ಗಿ ಕಾಣಿಕೆ ಡಬ್ಬಿಯೊಂದಿಗೆ ಪರಾರಿಯಾಗಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ ಈ ದೇವಾಲಯವನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ.

ಮಂಗಳವಾರ ರಾತ್ರಿ 8.45ರ ವರೆಗೆ ಸಿಬ್ಬಂದಿ ದೇವಸ್ಥಾನದಲ್ಲಿ ಹಾಜರಿದ್ದರು. ಬೆಳಗಿನ ಜಾವ 1 ರಿಂದ 2 ಗಂಟೆಯೊಳಗೆ ಕಳ್ಳತನ ನಡೆದಿದ್ದು, ಬೆಳಗಿನ ಜಾವ 5:45ಕ್ಕೆ ದೇವಸ್ಥಾನದ ಸಿಬ್ಬಂದಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಎರಡು ದೇಣಿಗೆ ಪೆಟ್ಟಿಗೆಗಳು ಕಾಣೆಯಾಗಿರುವುದನ್ನು ಕಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಶ್ವಾನ ದಳವನ್ನು ಕರೆತರಲಾಗಿದ್ದು, ಪರಿಶೀಲನೆ ನಡೆಸಿದಾಗ ಕಾಣಿಕೆ ಡಬ್ಬಿಗಳನ್ನು ಸಮೀಪದ ಚರಂಡಿಯಲ್ಲಿ ಹುಲ್ಲಿನಿಂದ ಮುಚ್ಚಿರುವುದು ಪತ್ತೆಯಾಗಿದೆ. ನವೆಂಬರ್ 29 ರಂದು ಕಾಣಿಕೆ ಡಬ್ಬಿಗಳನ್ನು ಖಾಲಿ ಮಾಡಿದ್ದರಿಂದ ಆರ್ಥಿಕ ನಷ್ಟ ಕಡಿಮೆಯಾಗಿದ್ದು, ಅಂದಾಜು 2,500 ರೂ. ಮಾತ್ರ ಕಳ್ಳನ ಪಾಲಾಗಿದೆ.

ಕಸಬಾ ಪೊಲೀಸರು ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳ ತನ್ನ ಕೃತ್ಯದ ವೇಳೆ ಮುಖವಾಡ ಬಳಸಿರುವುದು ಕಂಡು ಬಂದಿದೆ. ಕಳವಾದ ಬಾಕ್ಸ್‌ಗಳನ್ನು ಕಸಬಾ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಪಾವಮಣಿ ರಸ್ತೆ ಬಳಿಯ ಪ್ರದೇಶದಿಂದ ಕಳ್ಳನು ದೇವಾಲಯದ ಆವರಣವನ್ನು ಪ್ರವೇಶಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ.

ಪೋಲೀಸ್ ನಿರ್ವಹಣೆ

ಕೇರಳದ ಹೆಚ್ಚಿನ ದೇವಾಲಯಗಳು ಸರ್ಕಾರ ನಡೆಸುವ ದೇವಸ್ವಂ ಮಂಡಳಿಗಳಿಂದ ಆಡಳಿತ ನಡೆಸಲ್ಪಡುತ್ತವೆ. ಭದ್ರಕಾಳಿ ದೇವಸ್ಥಾನವನ್ನು ಸಾಮಾನ್ಯವಾಗಿ ‘ಪೊಲೀಸ್ ದೇಗುಲ’ ಎಂದು ಕರೆಯಲಾಗುತ್ತದೆ, ದಶಕಗಳಿಂದ ಪೊಲೀಸರು ಇದನ್ನು ನಿರ್ವಹಿಸುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ದೇವಸ್ಥಾನವನ್ನು ನಿರ್ವಹಣೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಸ್ಥಳೀಯ ಸಮಿತಿಯು ದೈನಂದಿನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದರೆ, ದೇವಸ್ಥಾನದ ಭದ್ರತೆಗೆ ಇಬ್ಬರು ಸಿವಿಲ್ ಪೊಲೀಸ್ ಅಧಿಕಾರಿಗಳನ್ನು (ಸಿಪಿಒ) ನಿಯೋಜಿಸಲಾಗಿದೆ. ಇದು ನಾರ್ಕೋಟಿಕ್ಸ್ ಸಹಾಯಕ ಆಯುಕ್ತರ ಮೇಲ್ವಿಚಾರಣೆಯಲ್ಲಿ ಬರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read