ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡ ವ್ಯಕ್ತಿ, ಸಂತ್ರಸ್ತೆಯನ್ನು ಕೊಲೆಗೈದು ಆಕೆಯ ದೇಹವನ್ನು ತುಂಡರಿಸಿದ ಆರೋಪದ ಮೇಲೆ ಈಗ ಆತನನ್ನು ಮತ್ತೆ ಬಂಧಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಂಕಿತ ಕುನು ಕಿಸ್ಸನ್‌ನನ್ನು ಬಂಧಿಸಲಾಗಿತ್ತು. ಇದೀಗ ಕೊಲೆ ಆರೋಪದ ಮೇಲೆ ಮತ್ತೆ ಬಂಧನಕ್ಕೆ ಒಳಗಾಗಿದ್ದಾನೆ.
ಸಂತ್ರಸ್ತೆ ಧಾರೌಡಿಹಿ ಪೊಲೀಸ್ ಠಾಣೆಗೆ ತಮ್ಮ ಮೇಲೆ ಅತ್ಯಾಚಾರವಾದ ಕುರಿತು ದೂರು ನೀಡಿದ್ದರು. ಈ ವರ್ಷದ ಡಿಸೆಂಬರ್ 7 ರಂದು, ಹುಡುಗಿಯ ಕುಟುಂಬವು ಆಕೆ ಕಾಣೆಯಾದ ಕುರಿತು ದೂರು ನೀಡಿದ್ದು, ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಆಕೆ ಇಬ್ಬರು ಪುರುಷರೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವುದು ಕಂಡು ಬಂದಿತ್ತು. ಇಬ್ಬರೂ ಹೆಲ್ಮೆಟ್ ಧರಿಸಿದ್ದು, ಗುರುತು ಪತ್ತೆ ಮಾಡುವುದು ಕಷ್ಟಕರವಾಗಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡ, ಪೊಲೀಸರು ಆತ ಕಿಸ್ಸಾನ್ ಎಂಬುದನ್ನು ಪತ್ತೆಹಚ್ಚಿದ್ದರು.
ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಬಾಲಕಿಯನ್ನು ಕೊಂದು ದೇಹದ ಭಾಗಗಳನ್ನು ಎರಡು ಪ್ರತ್ಯೇಕ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ರೂರ್ಕೆಲಾ ಮತ್ತು ದಿಯೋಘರ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 143ರಲ್ಲಿ ಆಕೆಯ ಕತ್ತು ಸೀಳಿ ನಂತರ ಬ್ರಹ್ಮಣಿ ನದಿಯ ಬಳಿ ತಾರ್ಕೆರಾ ಮತ್ತು ಬಲುಘಾಟ್‌ನಲ್ಲಿ ಅವಶೇಷಗಳನ್ನು ಎಸೆದಿದ್ದಾನೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಒಡಿಶಾ ಡಿಸಾಸ್ಟರ್ ರ್ಯಾಪಿಡ್ ಆಕ್ಷನ್ ಫೋರ್ಸ್ (ODRAF) ನೆರವಿನೊಂದಿಗೆ, ದೇಹದ ಭಾಗಗಳನ್ನು ಪತ್ತೆಹಚ್ಚಲು ಪೊಲೀಸರು ನದಿಯ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಿದರು. ಹಲವಾರು ಗಂಟೆಗಳ ನಂತರ, ಅವರು ಬಲಿಪಶುವಿನ ತಲೆ ಸೇರಿದಂತೆ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
ಪೂರ್ವಯೋಜಿತ ಕೊಲೆಗಾಗಿ ಕಿಸ್ಸಾನ್ ಮತ್ತು ಸಹಚರನನ್ನು ಬಂಧಿಸಲಾಗಿದ್ದು, ಸಂತ್ರಸ್ತೆ ನ್ಯಾಯಾಲಯದಲ್ಲಿ ತನ್ನ ವಿರುದ್ದ ಸಾಕ್ಷಿ ಹೇಳುವುದನ್ನು ತಡೆಯುವ ಉದ್ದೇಶದಿಂದ ಕಿಸ್ಸಾನ್ ತನ್ನ ಜಾಮೀನಿನ ನಂತರ ಅಪರಾಧವನ್ನು ಯೋಜಿಸಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.