ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರು ವಾಸವಿದ್ದ ಮನೆಯನ್ನು ಸರ್ಕಾರದ ವತಿಯಿಂದ ಖರೀದಿ ಮಾಡಿ ಸಂರಕ್ಷಣೆ ಮಾಡುವ ಸಂಬಂಧ ಹಿಂದೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಮೊತ್ತ 4,18,49,016 ರೂ.ಗಳಿಗೆ ಖರೀದಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರ ವಾರಸುದಾರರಿಂದ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ 2024ರ ಡಿ.10ರಂದು ಖರೀದಿ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ವಿಪಿ ಬಡಾವಣೆಯಲ್ಲಿರುವ ಮನೆಯನ್ನು ಹಿರಿಯ ಪುತ್ರ ಎಸ್.ಎನ್. ಕಿರಣ್ ಶಂಕರ್ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿದರು. 117 X 130 ಅಡಿ ವಿಸ್ತೀರ್ಣದ ನಿವೇಶನ ಮನೆ ಖರೀದಿಗೆ 18 ವರ್ಷಗಳಿಂದ ಪ್ರಯತ್ನ ನಡೆದಿತ್ತು. ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. 2020ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ನಿಜಲಿಂಗಪ್ಪ ನಿವಾಸ ಖರೀದಿಸುವ ಪ್ರಯತ್ನ ಅಂತಿಮ ಹಂತಕ್ಕೆ ಬಂದಿತ್ತು.
ಆಸ್ತಿ ನೋಂದಣಿ ವಿಚಾರದಲ್ಲಿ ತೊಡಕು ಉಂಟಾದ ಕಾರಣ ಮತ್ತೆ ವಿಳಂಬವಾಗಿದ್ದು, ಇದರಿಂದ ಬೇಸತ್ತ ನಿಜಲಿಂಗಪ್ಪ ಅವರ ಪುತ್ರ ಎಸ್.ಎನ್. ಕಿರಣ್ ಶಂಕರ್, ನಿಜಲಿಂಗಪ್ಪ ಅವರ ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮ ಕೈಗೊಂಡು ಮನೆ ಖರೀದಿಸಿದ್ದಾರೆ. ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗುವುದು.