ಕಾರವಾರ: ಕರ್ತವ್ಯ ನಿರತ ಸರ್ಕಾರಿ ವೈದ್ಯನ ಮೇಲೆ ರೋಗಿ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ನಡೆದಿದೆ.
ನಿನ್ನೆ ವೈದ್ಯ ಡಾ. ಸಂಗಮೇಶ್ ಅವರ ಮೇಲೆ ರೋಗಿ ವಿನೋದ್ ಹಲ್ಲೆ ನಡೆಸಿದ್ದಾನೆ. ಪೈಲ್ಸ್ ಗೆ ಔಷಧ ತೆಗೆದುಕೊಂಡು ಹೋಗುವ ನೆಪದಲ್ಲಿ ಬಂದು ಕೃತ್ಯ ಎಸಗಿದ್ದಾನೆ. ಸಂಗಮೇಶ್ ಅವರು ರೋಗಿಗೆ ಔಷಧ ಬರೆದು ಕೊಟ್ಟು ಫಾರ್ಮಸಿಗೆ ಕಳುಹಿಸಿದ್ದಾರೆ. ಫಾರ್ಮಸಿಯಿಂದ ಔಷಧ ಪಡೆದು ವೈದ್ಯರಿಗೆ ತೋರಿಸಿದ ವಿನೋದ್ ಸೀಲ್ ಆಗಿರುವ ಔಷಧ ಕೊಡು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾದ ವೈದ್ಯ ಸಂಗಮೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಆಯುಷ್ ಆಯುರ್ವೇದ ಆಸ್ಪತ್ರೆಯ ಅಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಂಗಮೇಶ್ ದೂರು ಕೊಟ್ಟಿದ್ದರು. ಅಕ್ರಮ ಬೆಳಕಿಗೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಕ್ರಮ ಬಯಲಿಗೆಳೆದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಉನ್ನತ ಅಧಿಕಾರಿಗಳೇ ಹಲ್ಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.