ಕೋಲಾರ: ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ದು:ಖ ವ್ಯಕ್ತಪಡಿಸಿರುವ ಸಚಿವ ಬೈರತಿ ಸುರೇಶ್, ವೈಯಕ್ತಿಕವಾಗಿ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ಹಣ ಘೋಷಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಮುರುಡೇಶ್ವರದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೈರತಿ ಸುರೇಶ ಸರ್ಕಾರದ ಜೊತೆಗೆ ವೈಯಕ್ತಿಕಗಾಲಿ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಅದರ ಜೊತೆಗೆ ಸಚಿವ ಬೈರತಿ ಸುರೇಶ್ ಕೂಡ ಮೃತ ಕುಟುಂಬದ ಸದಸ್ಯರಿಗೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಅಲ್ಲದೇ ಮೃತ ದೇಹಗಳನ್ನು ಅವರ ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದರು. 46 ಶಾಲಾ ವಿದ್ಯಾರ್ಥಿಗಳು, 6 ಶಿಕ್ಷಕರು ಸೇರಿದಂತೆ ಒಟ್ಟು 57 ಜನರು ಬಸ್‌ನಲ್ಲಿ ಮುರುಡೆಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ವೇಳೆ ನಿನ್ನೆ ಸಮುದ್ರ ನೀರಿನಲ್ಲಿ ಈಜುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ 7 ವಿದ್ಯಾರ್ಥಿನಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ಮೂವರು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿತ್ತು. ಓರ್ವ ವಿದ್ಯಾರ್ಥಿನಿ ಶ್ರವಂತಿ (15) ಶವವಾಗಿ ಪತ್ತೆಯಾಗಿದ್ದಳು. ಇನ್ನೂ ಮೂವರು ವಿದ್ಯಾರ್ಥಿನಿಯರಿಗಾಗಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ.
ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಶವಗಳನ್ನು ಇಂದು ಕರಾವಳಿ ಕಾವಲು ಪಡೆ ಸಿಬ್ಬಂದಿ ಹೊರತೆಗೆದಿದ್ದಾರೆ.