ರಾಯಚೂರು: ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಬೀದಿನಾಗಿಗಳ ದಾಳಿಯಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಜೀವಭಯದಲ್ಲೇ ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಬೀದಿನಾಯಿಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ ದಿನಕ್ಕೊಂದು ಪ್ರಕರಣಗಳು ವರದಿಯಾಗುತ್ತಿದ್ದರೂ ರಾಜ್ಯದಲ್ಲಿ ಬೀದಿನಾಯಿಗಳ ಕಡಿವಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ.
ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿಯೊಬ್ಬಳು ತಲೆಗೆ ಗಂಭೀರವಾಗಿ ಪೆಟ್ಟುಬಿದ್ದು ಕೋಮಾ ಸ್ಥಿತಿಗೆ ತಲುಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
20 ವರ್ಷದ ಯುವತಿ ಮಹಾದೇವಿ ಕೋಮಾ ಸ್ಥಿತಿ ತಲುಪಿದ್ದಾರೆ. ಯುವತಿ ಮಹಾದೇವಿ ಬೆಳಿಗ್ಗೆ ದೇವಸ್ಥಾನಕ್ಕೆಂದು ಹೊರಟಿದ್ದ ವೇಳೆ ಬೀದಿನಾಯಿಗಳು ದಾಳಿ ನಡೆಸಿವೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆಬಿದ್ದ ಯುವತಿಯ ತಲೆಗೆ ಗಂಭೀರವಾದ ಪೆಟ್ಟಾಗಿದೆ. ಇಷ್ಟಾದರೂ ನಾಯಿಗಳು ಯುವತಿಯನ್ನು ಎಳೆದಾಡಿವೆ. ಇದನ್ನು ಕಂಡು ಸ್ಥಳೀಯರು ಯುವತಿಯನ್ನು ರಕ್ಷಿಸಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿಯ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ರಕ್ತ ಹೆಪ್ಪುಗಟ್ಟಿದ್ದು, ಪ್ರಜ್ಞೆ ಕಳೆದುಕೊಂಡಿರುವ ಯುವತಿ ಕೋಮಾ ಸ್ಥಿತಿ ತಲುಪಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ಮುಂದುವರೆದಿದೆ.