ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಯೋಸಹಜ ಅನಾರೋಗ್ಯದಿಂದ ನಿನ್ನೆ ವಿಧಿವಶರಾಗಿದ್ದು, ಇಂದು ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಎಸ್.ಎಂ.ಕೃಷ್ಣ ಮಾರ್ಗದರ್ಶದಲ್ಲಿ ರಾಜಕೀಯಕ್ಕೆ ಸೇರಿ, ಸಂಸದೆಯಾಗಿದ್ದ ನಟಿ ರಮ್ಯಾ, ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜಕೀಯ ಮುತ್ಸದ್ದಿಯಾಗಿದ್ದ ಎಸ್.ಎಂ.ಕೃಷ್ಣ ಅಗಲಿಕೆಗೆ ತೀವ್ರ ದು:ಖ ವ್ಯಕ್ತಪಡಿಸಿರುವ ನಟಿ ರಮ್ಯಾ ಇನ್ ಸ್ಟಾಗ್ರಾಂ ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಎಲ್ಲಾ ರೀತಿಯಿಂದಲೂ ಒಬ್ಬ ಅಧ್ಭುತ ರಾಜನೀತಿಜ್ಞರಾಗಿದ್ದರೂ ಎಂದೂ ರಾಜಕಾರಣಿಯಂತೆ ವರ್ತಿಸಿರಲಿಲ್ಲ. ಯಾರನ್ನೂ ನೋಯಿಸಿರಲಿಲ್ಲ. ಯಾರ ಬಗ್ಗೆಯೂ ಕೀಳಾಗಿ ಅವರು ಮಾತನಾಡಿದವರಲ್ಲ ಎಂದಿದ್ದಾರೆ.
ಎದುರಾಳಿಗಳ ಬಗ್ಗೆಯೂ ಅದೇ ಗೌರವರನ್ನು ನೀಡುತ್ತಿದ್ದರು. ಮಾನವೀಯತೆ, ದೂರದೃಷ್ಟಿಯುಳ್ಳ, ಸಿಹಿ ಮಾತುಗಳ ಕೃಷ್ಣ ಅವರು ಚೆನ್ನಾಗಿ ಓದಿಕೊಂಡಿದ್ದವರು. ಹಾಸ್ಯಪ್ರಜ್ಞೆ, ಸುಂದರ ವ್ಯಕ್ತಿತ್ವವಿರುವ ಅವರಂಥಹ ಮತ್ತೋರ್ವ ವ್ಯಕ್ತಿ ಸಿಗಲಾರರು. ನೀವು ನೀಡಿದ ಎಲ್ಲದಕ್ಕೂ ಧನ್ಯವಾದಗಳು. ನೀವು ಈಗ ನಿಮ್ಮ ಆತ್ಮೀಯ ಗೆಳೆಯನನ್ನು ಸೇರಿಕೊಂಡಿದ್ದೀರಿ ಎಂದು ಬರೆದುಕೊಂಡಿದ್ದಾರೆ.
ರಮ್ಯಾ ಅವರ ಸಾಕು ತಂದೆ ಆರ್.ಟಿ.ನಾರಾಯಣ್ ಅವರು ಎಸ್.ಎಂ.ಕೃಷ್ಣ ಅವರ ಆತ್ಮೀಯ ಗೆಳೆಯರಾಗಿದ್ದರು. ಇಬ್ಬರೂ ಒಟ್ಟಿಗೆ ಟೆನ್ನೀಸ್ ಆಡುತ್ತಿದ್ದರು. ಹಲವು ವರ್ಷಗಳಿಂದ ಎಸ್.ಎಂ.ಕೃಷ್ಣ, ನಾರಾಯಣ್ ಗೆಳೆಯರಾಗಿದ್ದರು. ಇದೇ ಕಾರಣಕ್ಕೆ ರಮ್ಯಾ, ನೀವೀಗ ನಿಮ್ಮ ಆತ್ಮೀಯ ಗೆಳೆಯನನ್ನು ಸೇರಿಕೊಂಡಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ.