ಬೆಳಗಾವಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು ಶೇಕಡ 65 ರಿಂದ 75ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವ ಮಾಹಿತಿ ಇದೆ. ಬಡತನದಲ್ಲಿ ಇರುವ ಜನತೆಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಇನ್ನಷ್ಟು ಸಮಯ ಪಡೆದುಕೊಂಡು ಬಿಪಿಎಲ್ ಪಡಿತರದಾರರಿಗೆ ತೊಂದರೆಯಾಗದ ಹಾಗೆ ಎಪಿಎಲ್ ಕಾರ್ಡ್‌ಗೆ ಅರ್ಹ ಇರುವವರನ್ನು ಬಿಪಿಎಲ್‌ನಿಂದ ಬೇರ್ಪಡಿಸಲಾಗುವುದು ಎಂದರು.
ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್‌ಗಳಲ್ಲಿ ಶೇಕಡ 20 ರಷ್ಟು ಎಪಿಎಲ್ ಕಾರ್ಡ್‌ದಾರರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದನ್ನು ಅತೀ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ. ಅರ್ಹ ಬಿಪಿಎಲ್ ಕಾರ್ಡ್‌ಗಳು ಯಾವುದೇ ರೀತಿಯಲ್ಲಿ ರದ್ದಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅರ್ಹರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ ಅಂಥವರಿಗೆ ಪುನಃ ಕಾರ್ಡ್ ದೊರಕಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.