ಬೆಳಗಾವಿ: ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನವೇ ಸರ್ಕಾರಕ್ಕೆ ವಿವಿಧ ಸಂಘಟನೆಗಳ ಪ್ರತಿಭಟನೆಯ ಬಿಸಿ ತಟ್ಟಲಿದೆ. 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಟಕ್ಕೆ ಸಜ್ಜಾಗಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದರು. ಆದರೆ ಬೆಳಗಾವಿ ಜಿಲ್ಲಾಡಳಿತ ಟ್ರ್ಯಾಕ್ತರ್ ರ್ಯಾಲಿಗೆ ಅವಕಾಶ ನೀಡಿಲ್ಲ. ಟ್ರ್ಯಾಕ್ಟರ್ ರ್ಯಾಲಿ, ಅಥವಾ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ ನಿಷೇಧ ಹೇರಲಾಗಿದೆ ಎಂದು ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಡಿಸಿ ಆದೇಶದ ಬೆನ್ನಲ್ಲೇ ಕಿಡಿಕಾರಿರುವ ಸ್ವಾಮೀಜಿ, ಇದು ಹೋರಾಟವನ್ನು ಹತ್ತಿಕ್ಕುವ ಯತ್ನವಾಗಿದೆ. ಪಂಚಮಸಾಲಿ ಸಮುದಾಯದ ಹೋರಾಟ ಹತ್ತಿಕ್ಕಲು ಯತ್ನಿಸಿದರೆ ಸರ್ಕಾರ ಇನ್ನಷ್ಟು ಪ್ರತಿಭಟನೆ ಎದಿರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಟ್ರ್ಯಾಕ್ಟರ್ ರಾಲಿಗೆ ತಡೆಯೊಡ್ಡಿದರೆ ಕಾಲ್ನಡಿಗೆ ಮೂಲಕ ಸುವರ್ಣ ಸೌಧ ಮುತ್ತಿಗೆ ಹಾಕುತ್ತೇವೆ. ಒಂದು ವೇಳೆ ಅದಕ್ಕೂ ತಡೆ ನೀಡಿದರೆ ಸುವರ್ಣ ಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.