ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬಿಇಒ ಸುಖದೇವ್ ಹೆಚ್. ಅವರನ್ನು ಶನಿವಾರ ಅಮಾನತು ಮಾಡಲಾಗಿದೆ.
ದೇವದುರ್ಗ ತಾಲೂಕಿನ ಊಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನೀಡಿದ ಅನುದಾನ ದುರ್ಬಳಕೆ, ಭ್ರಷ್ಟಾಚಾರ, ಕರ್ತವ್ಯ ಲೋಪ ಮತ್ತು ಸೇವಾ ನಿರ್ಲಕ್ಷ್ಯ ಸಾಬೀತಾದ ಹಿನ್ನೆಲೆಯಲ್ಲಿ ಸುಖದೇವ್ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
30 ಲಕ್ಷ ರೂಪಾಯಿ ಉಪಯೋಗಪಡಿಸಿಕೊಂಡ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪಟ್ಟಣದ ಕಾಂಗ್ರೆಸ್ ಮುಖಂಡ ಟಿ. ಸುರೇಶ್ ನಾಯಕ್ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿ ವರದಿ ನೀಡಲು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು. ಪ್ರಾಥಮಿಕ ವಿಚಾರಣೆಯಲ್ಲಿ ಹಣಕಾಸು ದುರ್ಬಳಕೆ, ಭ್ರಷ್ಟಾಚಾರ, ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.