ಬೆಂಗಳೂರು: ಫ್ಲೈಓವರ್ ಸಮೀಪ ಮಲಗಿದ್ದ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಮಾನಸಿಕ ಅಸ್ವಸ್ಥೆ ಕೊಲೆ ಮಾಡಿದ ಘಟನೆ ಶನಿವಾರ ದಾಬಸ್ ಪೇಟೆಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನರಸಿಂಹಮೂರ್ತಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಮಾನಸಿಕ ಅಸ್ವಸ್ಥೆ ಉಮಾದೇವಿ ಕಲ್ಲಿನಿಂದ ಹೊಡೆದು ನರಸಿಂಹಮೂರ್ತಿಯನ್ನು ಕೊಲೆ ಮಾಡಿದ್ದಾಳೆ. ಅನೇಕ ವರ್ಷಗಳಿಂದ ದಾಬಸ್ ಪೇಟೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ನರಸಿಂಹಮೂರ್ತಿ ಶನಿವಾರ ಉದ್ದಾನೆಶ್ವರ ದೇವಾಲಯ ಸಮೀಪದ ಫ್ಲೈ ಓವರ್ ಬಳಿ ಮಲಗಿದ್ದು, ಆತನ ಮೇಲೆ ರಾಮನಗರ ಜಿಲ್ಲೆ ಕುದೂರು ಮೂಲದ ಉಮಾದೇವಿ ಎಂಬಾಕೆ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆತನನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.