ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.
10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮುಡಾ ಹಗರಣ, ವಕ್ಪ್ ವಿವಾದ, ಬಾಣಂತಿಯರ ಸಾವಿನ ಬಗ್ಗೆ ಸರ್ಕಾರ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಕೊರೊನಾ ಹಗರಣ ಕುರಿತಂತೆ ಕುನ್ಹಾ ವರದಿ, ಬಿಜೆಪಿ ಹಗರಣಗಳು ಸೇರಿ ಹಲವು ಪ್ರಕರಣಗಳನ್ನು ಪ್ರಸ್ತಾಪಿಸಿ ತಿರುಗಿ ಬೀಳಲು ಕಾಂಗ್ರೆಸ್ ಕೂಡ ಸಿದ್ಧತೆ ಮಾಡಿಕೊಂಡಿದೆ.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಇದೆ. ಅಧಿವೇಶನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಮೊದಲಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಲಾಗುವುದು. ಕಳೆದ ಅಧಿವೇಶನದಿಂದ ಈಚೆಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ನಂತರ ಪ್ರಶ್ನೋತ್ತರ ಅವಧಿ ಕೈಗೊಂಡು ಕಲಾಪ ಮುಂದೂಡಲಾಗುವುದು.