ಹುಬ್ಬಳ್ಳಿ: ಗುಣಮಟ್ಟದ ಔಷಧಿ ಖರೀದಿ ಮಾಡಲೂ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಕಳಪೆ ಔಷಧಿ ಪೂರೈಕೆ ಕಂಪನಿಗಳಿಂದ ಖರೀದಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಆರ್ಥಿಕ, ಬೌದ್ಧಿಕವಾಗಿ ದಿವಾಳಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯೇ ಲಭ್ಯವಿಲ್ಲ. ವೈದ್ಯರು ಹೊರಗಡೆ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ರಾಜ್ಯವನ್ನು ಇಂಥ ಅವಸ್ಥೆಗೆ ತಂದಿಟ್ಟಿದೆ ಕಾಮ್ಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಕಂಪನಿಗಳಿಂದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಸಿಕ್ಕ ಸಿಕ್ಕ ಕಂಪನಿಗಳಿಂದ ಔಷಧಿ ಖರೀದಿಸುತ್ತಿದ್ದಾರೆ. ಅದರ ಪರಿಣಾಮದಿಂದಲೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ ಎಂದರು.
ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಈಗ ಪ್ರಕರಣದ ಗಂಭೀರತೆ, ಸೂಕ್ಷ್ಮತೆ ಅರಿತಿದ್ದಾರೆ. ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಆರೋಗ್ಯ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಐವಿ ದ್ರಾವಣಕ್ಕೆ ಕೇಂದ್ರ ಅನುಮತಿ ನೀಡಿದೆ ಎಂದಿದ್ದಾರೆ. ಆದರೆ, ಕೇಂದ್ರದ ಅನುಮತಿ ಪಡೆಯುವಾಗ ಗುಣಮಟ್ಟದ ಔಷಧಿ ಕಳಿಸಿ ನಂತರದಲ್ಲಿ ಕಳಪೆ ಗುಣಮಟ್ಟದ್ದನ್ನು ಪೂರೈಸಿದರೆ ಯಾರು ಹೊಣೆ? ರಾಜ್ಯ ಸರ್ಕಾರ ಆಗಾಗ ತಪಾಸಣೆ ನಡೆಸಬೇಕಲ್ಲವೇ? ಎಂದು ಪ್ರಶ್ನಿಸಿದರು.