ಚಿತ್ರದುರ್ಗ: ತೆರಿಗೆ ವಂಚಿಸಿ ಅಕ್ರಮವಾಗಿ ದಾಖಲೆ ಇಲ್ಲದೆ 7 ಲಾರಿಗಳಲ್ಲಿ ಸಾಗಿಸುತ್ತಿದ್ದ ಸುಮಾರು 7 ಕೋಟಿ ರೂಪಾಯಿ ಮೌಲ್ಯದ 210 ಟನ್ ಅಡಿಕೆ ಮತ್ತು ಲಾರಿಗಳನ್ನು ಜಿಎಸ್‌ಟಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದಿಂದ ಹೊಸಪೇಟೆಗೆ ಅಡಿಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಜಿಎಸ್‌ಟಿ ಅಧಿಕಾರಿ ಹಮೀದ್ ಸಿದ್ದಿಖಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಿತ್ರದುರ್ಗ ಡಿಎಆರ್ ಮೈದಾನಕ್ಕೆ ಲಾರಿಗಳನ್ನು ತಂದು ದಾಖಲೆ ಪರಿಶೀಲಿಸಲಾಗಿದೆ.
ತಿಂಗಳ ಹಿಂದೆ ಅಡಿಕೆ ವ್ಯಾಪಾರಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಜಿ.ಎಸ್.ಟಿ. ಪಾವತಿಸದೆ ವಹಿವಾಟು ನಡೆಸಿದ್ದೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ಜಿ.ಎಸ್.ಟಿ. ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಸಮರ್ಪಕವಾದ ದಾಖಲೆ ಸಲ್ಲಿಸದ ಕಾರಣ ಲಾರಿಗಳನ್ನು ಅಡಿಕೆ ಸಮೇತ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.