ಬೆಂಗಳೂರು: ಅಧಿಕಾರಕ್ಕೆ ಬರುವ ಮೊದಲು ಬಳ್ಳಾರಿ ಜಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು, ಅಲ್ಲಿ ಐವರು ಬಾಣಂತಿಯರ ಸಾವಾದರೂ ಏಕೆ ಬಳ್ಳಾರಿಯತ್ತ ಹೋಗಿಲ್ಲ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಐವರು ಬಾಣಂತಿಯರು ಸಾವನ್ನಪ್ಪಿದರೂ ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂ ಸಿದ್ದರಾಮಯ್ಯ ಸೌಜನ್ಯಕ್ಕೂ ಜಿಲೆಗೆ ಭೇಟಿಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವರು ಯಾರೊಬ್ಬರಿಗೂ ಈಗ ಬಳ್ಳಾರಿ ಜನರ ಅದರಲ್ಲೂ ಮಹಿಳೆಯರ ಜೀವ ರಕ್ಷಣೆ ಕಾರ್ಯ ಬೇಡವಾಯಿತೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದ ಬಗ್ಗೆ ಗಮನವಿಲ್ಲ. ಮೂಡಾ ಹಗರಣದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಮುಂದಾಗಿ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದರು.
ಬಳ್ಳಾರಿಯಲ್ಲಿ ಬಾಣಂತಿಯರ ದುರಂತ ಸಾವಿಗೆ ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಕಾರಣ. ಈ ಪ್ರಕರಣದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.
ಇನ್ನು ಐವಿ ದ್ರಾವಣ ಸ್ಯಾಂಪಲ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ನಿಜ. ಆದರೆ, ಬಳ್ಳಾರಿ ಬಿಟ್ಟರೆ ಪಕ್ಕದ ರಾಜ್ಯಗಳಲ್ಲಿ ಎಲ್ಲೂ ಈ ಸಮಸ್ಯೆ ಉದ್ಭವಿಸಿಲ್ಲ. ಸುಮ್ಮನೇ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.