ಶಿವಮೊಗ್ಗ: ಡಿಜಿಟಲ್ ಯುಗದ ನಡುವೆಯು ಮುದ್ರಣ ಮಾಧ್ಯಮ ಉಳಿದುಕೊಳ್ಳಲು ವಿಶ್ವಾಸರ್ಹವೇ ಕಾರಣ ಎಂದು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ಟ ಹೇಳಿದರು.
ಅವರು ಇಂದು ಪತ್ರಿಕಾಭವನದಲ್ಲಿ ಕ್ರಾಂತಿದೀಪ ಎನ್. ಮಂಜುನಾಥ್ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಮೊಹರೆ ಹಣಮಂತರಾಯ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಎನ್. ಮಂಜುನಾಥ್ ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದು ಡಿಜಿಟಲ್ ಯುಗವಾಗಿದೆ. ಈಗ ಮುದ್ರಣ ಪತ್ರಿಕೆಗಳಿಗೆ ಒಂದು ರೀತಿಯಲ್ಲಿ ಮೊಬೈಲ್ ಪ್ರತಿಸ್ಪರ್ಧಿಯಾಗಿದೆ. ಮೊಬೈಲ್ ಇಟ್ಟುಕೊಂಡವರೆಲ್ಲಾ ಪತ್ರಕರ್ತರಾಗುತ್ತಿದ್ದಾರೆ. ಓದುವ ಸಂಸ್ಕೃತಿ ಮರೆಯಾಗಿ ನೋಡುವ ಸಂಸ್ಕೃತಿ ಹುಟ್ಟಿಕೊಂಡಿದೆ. ಏನೇ ಆದರೂ ಮುದ್ರಣ ಮಾಧ್ಯಮ ಸೊರಗುತ್ತದೆಯೇ ಹೊರತು ಸಾಯುವುದಿಲ್ಲ. ಮತ್ತೆ ಅದು ಮುನ್ನಲೆಗೆ ಬಂದೇ ಬರುತ್ತದೆ ಎಂದರು.
ಎಷ್ಟೇ ಟಿವಿ ಚಾನಲ್ಗಳು ಬಂದರೂ ತಕ್ಷಣದ ಸುದ್ದಿಗಳನ್ನು ಅವು ಪ್ರಸಾರ ಮಾಡಿದರೂ ಕೂಡ ಓದುಗರು ಮಾರನೇ ದಿನವಾದರೂ ದಿನಪತ್ರಿಕೆಯನ್ನೇ ನೋಡುತ್ತಾರೆ. ಅದಕ್ಕೆ ಬಹುಮುಖ್ಯವಾದ ಕಾರಣವೆಂದರೆ ವಿಶ್ವಾಸಾರ್ಹತೆಯೇ ಆಗಿದೆ. ಪತ್ರಿಕೆಯಲ್ಲಿ ಬಂದಿದ್ದೇ ಸರಿ ಎಂಬ ಮನೋಭಾವನೆ ಓದುಗರಲ್ಲಿ ಇರುವುದರಿಂದ ಮುದ್ರಣ ಮಾಧ್ಯಮಕ್ಕೆ ತಾತ್ಕಾಲಿಕ ಸಂಕಷ್ಟ ಬಂದಿದ್ದರು ಕೂಡ ಅದು ಶಾಶ್ವತವಲ್ಲ ಎಂದರು.
ಇಂತಹ ಸಂದರ್ಭದಲ್ಲೂ ಕೂಡ ಮಂಜುನಾಥ್ ಕಳೆದ 40 ವರ್ಷಗಳಿಂದ ಪತ್ರಿಕೆ ನಡೆಸುತ್ತ ಬಂದಿರುವುದು ಸುಲಭದ ಮಾತಲ್ಲ. ಅದರಲ್ಲೂ ಲೋಕಲ್ ಪತ್ರಿಕೆಗಳು ಈಗ ಲೋಕದ ಸುದ್ದಿಗಳನ್ನೆ ನೀಡುತ್ತಿವೆ. ಪತ್ರಿಕೆಗಳು ಕೂಡ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಪತ್ರಿಕೋಧ್ಯಮವನ್ನು ಕಾವಲು ನಾಯಿ ಎಂದು ಕರೆಯುತ್ತಾರೆ. ಅವು ಈಗ ಕಚ್ಚುವುದು ಇಲ್ಲ. ಬೊಗಳುವುದು ಇಲ್ಲ, ಈ ಸ್ಥಿತಿಗೆ ತಲುಪಿವೆ. ಇದರಿಂದ ಪತ್ರಿಕೋದ್ಯಮ ಹೊರ ಬರಬೇಕಾಗಿದೆ ಎಂದರು.
ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ರವಿಕುಮಾರ್ ಮಾತನಾಡಿ, ಮಂಜುನಾಥ್ ನಿಷ್ಠುರವಾದಿಯಾಗಿ ಪತ್ರಿಕಾ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೆಸರನ್ನ ಮಾಡಿದ್ದಾರೆ ಯಾವುದೇ ಒಂದು ಸಂಘ ಸಂಸ್ಥೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರೆ ನಿಷ್ಠುರವಾಗಿ ಮಾತನಾಡುವ ಮೂಲಕ ಆ ಸಂಸ್ಥೆ ಸಂಘವನ್ನ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಯಶಸ್ಸು ಮಂಜುನಾಥ್ ರವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಪತ್ರಕರ್ತ ಹೊನಕೆರೆ ನಂಜುಂಡೇಗೌಡರು ಮಾತನಾಡಿ ಶಿವಮೊಗ್ಗ ವಿಶೇಷವಾದ ಗುಣವುಳ್ಳ ಕ್ಷೇತ್ರವಾಗಿದೆ. ಇಲ್ಲಿ ಸ್ನೇಹಮಹಿ ವಾತಾವರಣವಿದೆ. ಪತ್ರಿಕಾ ಸಮುದಲ್ಲಿ ಸಹ ಅತ್ಯಂತ ವಿಶ್ವಾಸಾರ್ಹ ಹಾಗೂ ಸ್ನೇಹಮಯ ವಾತಾವರಣದಿಂದ ಎಲ್ಲಾ ಪತ್ರಕರ್ತರು ಒಟ್ಟಿಗೆ ಕುಳಿತು ಚರ್ಚಿಸಿ ಕೆಲಸ ಮಾಡುವಂತಹ ಸೌಹಾರ್ದತೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಮಾತನಾಡಿ, ಪತ್ರಿಕೆ ವಿದ್ಯೆಯ ಜ್ಞಾನವನ್ನು ಹೆಚ್ಚಿಸುವಂತಹ ಸಾಧನವಾಗಿದೆ ಪ್ರತಿನಿತ್ಯ ಪತ್ರಿಕೆಗಳನ್ನ ಓದುವಂತಹ ಸ್ವಭಾವವನ್ನ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತಪ್ಪು ಮಾಡಿದಾಗ ಅದನ್ನು ಬರೆಯುವ ಮೂಲಕ ಆತನ ಸರಿ ತಪ್ಪುಗಳನ್ನ ತಿಳಿಸುವಂತಹ ಕಾರ್ಯವನ್ನ ಪತ್ರಿಕೆಗಳು ಮಾಡಿಕೊಂಡು ಬಂದಿವೆ ಎಂದ ಅವರು, ಸಮಾಜದ ನ್ಯೂನ್ಯತೆಗಳನ್ನ ತಿದ್ದುವ ನಿಟ್ಟಿನಲ್ಲಿಯೂ ಕೂಡ ಪತ್ರಿಕೆಗಳು ತಮ್ಮದೇ ಆದ ಪಾತ್ರವನ್ನು ವಹಿಸಿವೆ ಎಂದು ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಹೊನ್ನಾಳಿ ಚಂದ್ರಶೇಖರ್, ಎನ್. ಮಂಜುನಾಥ್ ಅತ್ಯಂತ ವೇಗದ ವ್ಯಕ್ತಿ. ಅವರು ಆರಂಭದ ದಿನಗಳಲ್ಲಿ ಸೈಕಲ್ ಮೇಲೆ ಓಡಾಡುತ್ತಿದ್ದರು. ಸೈಕಲ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿಯೇ ಪ್ರಥಮ ಸ್ಥಾನವನ್ನ ಪಡೆದಂತವರು ನಂತರದ ದಿನಗಳಲ್ಲಿ ಬೈಕ್, ಕಾರುಗಳನ್ನು ಓಡಿಸಲಾರಂಭಿಸಿದರು. ಅವುಗಳನ್ನು ಸಹ ಅಷ್ಟೇ ವೇಗವಾಗಿ ಓಡಿಸುತ್ತಿರುವ ಮಂಜುನಾಥ್ ಸಂಘ ಸಂಸ್ಥೆ ಸಾಮಾಜಿಕ ಚಟುವಟಿಕೆಗಳು ಯಾವುದನ್ನೇ ಕೈಗೊಳ್ಳಲಿ ಬಹಳ ವೇಗದಲ್ಲಿ ಆ ಸಂಘಟನೆ ಹಾಗೂ ಸಂಘಗಳನ್ನು ತರುತ್ತಾರೆ ಇದು ಮಂಜಣ್ಣನವರ ವಿಶೇಷ ಎಂದು ಹೇಳಿದರು.
ಕ್ರಾಂತಿದೀಪ ಪತ್ರಿಕಾ ಕಚೇರಿ ಪತ್ರಿಕೋದ್ಯಮದ ಪಾಠಶಾಲೆ ಎಂದರೆ ತಪ್ಪಾಗಲಾರದು, ಪ್ರಸ್ತುತ ಇಲ್ಲಿಯವರೆಗೂ ನೂರಕ್ಕೂ ಅಧಿಕ ಪತ್ರಕರ್ತರು ಈ ಪಾಠಶಾಲೆಯಿಂದ ಹೊರ ಬಂದಿದ್ದಾರೆ. ಅನೇಕರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕ್ರಾಂತಿವೀಪ ಪತ್ರಿಕೆಯ ವಿಶೇಷತೆಯಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್ ಮಾತನಾಡಿ, 40 ವರ್ಷಗಳ ಕಾಲ ಪತ್ರಿಕೆ ಮುನ್ನಡೆದುಕೊಂಡು ಬಂದಿದೆ ಎಂದರೆ ಅದಕ್ಕೆ ಓದುಗರೇ ಕಾರಣ ಎಂದು ಹೇಳಿದರು.
ಎಸ್.ಬಿ. ರಾಮಪ್ಪ, ಮಿಂಚು ಶ್ರೀನಿವಾಸ್ ಇವರುಗಳನ್ನ ನಾನು ನನ್ನ ವೃತ್ತಿಯಲ್ಲಿ ಮರೆಯುವುದು ಸಾಧ್ಯವೇ ಇಲ್ಲ ಎಂದ ಅವರು, ಮಧ್ಯ ಕರ್ನಾಟಕದ ಮೊಟ್ಟ ಮೊದಲ ಪ್ರಾದೇಶಿಕ ಪತ್ರಿಕೆಯಾಗಿ ಕ್ರಾಂತಿದೀಪ ಹೊರಹೊಮ್ಮಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ರಾಜ್ಯಮಟ್ಟದ ಪತ್ರಿಕೆಯಾಗಿ ಹೊರಹೊಮ್ಮಲು ಪ್ರಯತ್ನ ನಡೆಸುತ್ತೇನೆ ಎಂದರು.
ಸಂಕಷ್ಟದ ಸರಮಾಲೆಯಲ್ಲಿಯು ಪತ್ರಿಕೆ ಇಲ್ಲಿಯವರೆಗೂ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬದುಕಿನ ದೀಪವಾಗಿ ಬೆಳೆದು ಬಂದಿದೆ. ಓದುಗರ ಮೆಚ್ಚಿನ ಪತ್ರಿಕೆಯಾಗಿಯೂ ಕೂಡ ಹೊರಹೊಮ್ಮಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಎಂ.ಎನ್. ಸುಂದರರಾಜು ಮಾತನಾಡಿ, ಅಭಿನಂದನಾ ಗ್ರಂಥ ಬಿಡುಗಡೆ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಕ್ರಾಂತಿದೀಪ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪತ್ರಿಕೆಯಾಗಿ ಹೊರಹೊಮ್ಮಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿ ವತಿಯಿಂದ ಎನ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಸದಸ್ಯ ಎಸ್.ಎಸ್. ವಾಗೀಶ್ ಸ್ವಾಗತಿಸಿದರು. ಶಾಂತಾಶೆಟ್ಟಿ ನಿರೂಪಿಸಿದರು.