ಪತಿಯ ವಿಪರೀತ ಗುಟ್ಕಾ ಸೇವನೆ ಚಟಕ್ಕೆ ಬೇಸತ್ತ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಗುಟ್ಕಾ ಸೇವನೆ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ ನವವಿವಾಹಿತೆ ಪದೇ ಪದೇ ಗುಟ್ಕಾ ಸೇವಿಸುವ ಪತಿಯ ಅಭ್ಯಾಸದಿಂದ ಹತಾಶಳಾಗಿದ್ದಳು ಎಂದು ವರದಿಯಾಗಿದೆ.
ಮೃತರನ್ನು ಆರೋನ್ ಪ್ರದೇಶದ ಮಧಿ ಮನೋಹರ್ ಪುರ ಗ್ರಾಮದ ಬಂಟಿ ನಾಯಕ್ ಅವರ ಪತ್ನಿ ರಚನಾ ಬಾಯಿ ಎಂದು ಗುರುತಿಸಲಾಗಿದೆ.
ಪತ್ನಿ ನಿರಾಕರಿಸಿದ ಬಳಿಕವೂ ಪತಿ ಗುಟ್ಕಾ ಖರೀದಿಸಲು ತೆರಳಿದ್ದ. ಅವನು ಹಿಂತಿರುಗಿದಾಗ ಪತ್ನಿ ಸೀಲಿಂಗ್ ನಲ್ಲಿ ನೇತಾಡುತ್ತಿದ್ದುದನ್ನು ನೋಡಿ ಗಂಡ ಆಘಾತಕ್ಕೊಳಗಾದ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮಾಹಿತಿ ಪ್ರಕಾರ, ಗುರುವಾರ ಮಧ್ಯಾಹ್ನ ಬಂಟಿ ಮತ್ತು ರಚನಾ ಮನೆಯಲ್ಲಿದ್ದರು. ಬಂಟಿ ತನ್ನ ಹೆಂಡತಿಗೆ ತಾನು ತಂಬಾಕು ಖರೀದಿಸಲು ಹೋಗುತ್ತಿದ್ದು ಶೀಘ್ರದಲ್ಲೇ ವಾಪಸ್ ಬರ್ತೀನಿ ಎಂದು ಹೇಳಿದನು. ಅದಕ್ಕೆ ಪತ್ನಿ ನಿರಾಕರಿಸುತ್ತಿದ್ದಂತೆ ದಂಪತಿ ನಡುವೆ ತೀವ್ರ ಜಗಳ ನಡೆದರೂ ಪತ್ನಿಯ ಮನವಿಗೆ ಕಿಂಚಿತ್ತೂ ಸೊಪ್ಪು ಹಾಕದ ವ್ಯಕ್ತಿ ಮನೆಯಿಂದ ಹೊರ ನಡೆದಿದ್ದಾನೆ.
ಇದರಿಂದ ಕೋಪಗೊಂಡ ರಚನಾ ಗುಟ್ಕಾ ಖರೀದಿಗೆ ಮುಂದಾದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಳು.
ಬಂಟಿಯ ಗುಟ್ಕಾ ಚಟ ತಡೆಯಲಾರದೆ ಪತ್ನಿ ಮನೆಯ ತೊಲೆಗೆ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಬಂಟಿ ಅಂಗಡಿಯಿಂದ ಹಿಂತಿರುಗಿದಾಗ ಹೆಂಡತಿ ನೇತಾಡುತ್ತಿದ್ದ ಸ್ಥಿತಿಯಲ್ಲಿದ್ದುದನ್ನು ಕಂಡು ಆಘಾತಗೊಂಡನು. ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆರೂನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.