ಬೆಂಗಳೂರು: ಪೇಮೆಂಟ್ ಗೇಟ್ ವೇ ಪ್ಲಾಟ್ ಫಾರ್ಮ್ ಗೆ ನಕಲಿ ಕಂಪನಿ ಹೆಸರಲ್ಲಿ ನೋಂದಣಿ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬೆಂಗಳೂರು ಆಗ್ನೇಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಜಸ್ಥಾನ ಮೂಲದ ನಿತೀಶ್ ಯಾದವ್ (26) ಎಂದು ಗುರುತಿಸಲಾಗಿದೆ. ಹರಿಯಾಣದ ಗುರ್ ಗಾಂವ್ ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಆರೋಪಿ ಕ್ಯಾಶ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿಗೆ 15.58 ಲಕ್ಷ ರೂಪಾಯಿ ವಂಚನೆ ಮಾಡಿದ್ದ. ಕ್ಯಾಶ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪನಿ ವ್ಯಾಪಾರಿ ಹಾಗೂ ಗ್ರಾಹಕರ ನಡುವೆ ಪೇಮೆಂಟ್ ಗೇಟ್ ವೇ ವೇದಿಕೆ ಸೃಷ್ಟಿಸಿ ಸೇವೆ ಸಲ್ಲಿಸುತ್ತದೆ. ಈ ಕಂಪ್ನಿ ಜೊತೆ ಆರೋಪಿಗಳು ಸಿವೈಸಿ ಎನ್ ಎಂಬ ನಕಲಿ ಕಂಪನಿ ಹೆಸರನ್ನು ನೋಂದಾಯಿಸಿದ್ದರು. ಈ ಮೂಲಕ ಐಐಟಿ, ಜೆಇಇ ಹಾಗೂ ನೀಟ್ ಗೆ ಆನ್ ಲೈನ್ ನಲ್ಲಿ ತರಗತಿ ಮತ್ತು ಪಠ್ಯಪುಸ್ತಕ ಒದಗಿಸುವುದಾಗಿ ಹೇಳಿಕೊಂಡಿದ್ದರು.
ವೆಬ್ ಸೈಟ್ ನಲ್ಲಿ ಆನ್ ಲೈನ್ ಕೋಚಿಂಕ್ ಬಗ್ಗೆ ಜಾಹೀರಾತು ನೀಡಿದ್ದರು. ವಿದ್ಯಾರ್ಥಿಗಳಿಂದ ಆನ್ ಲೈನ್ ಕೋಚಿಂಗ್, ಪುಸ್ತಕಗಳಿಗಾಗಿ 2 ಲಕ್ಷ ಹಣ ತುಂಬಿಸಿಕೊಳ್ಳುತ್ತಿದ್ದರು. ಹೀಗೆ ಆರೋಪಿಗಳು ನಾನಾ ಹೆಸರುಗಳಲ್ಲಿ ವಂಚನೆ ಮಾಡುತ್ತಿದ್ದರು. ರೀಫಂಡ್ ಹೆಸರಿನಲ್ಲಿಯೂ ವಂಚಿಸುತ್ತಿದ್ದರು. ಸದ್ಯ ಗುರ್ ಗಂವ್ ನಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.