ಬೆಂಗಳೂರು: ಬಗರ್ ಹುಕುಂ ಸಾಗುವಳಿ ಮಂಜೂರಾತಿ ಪಡೆದ ರೈತರಿಗೆ ಡಿಜಿಟಲ್ ಸಾಗುವಳಿ ಪತ್ರ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ರೈತರು ಕಚೇರಿಗೆ ಅಲೆದಾಡುವುದು, ದಾಖಲೆ ಕಳೆದುಕೊಳ್ಳುವುದು ತಪ್ಪಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಗುವಳಿ ಮಂಜೂರಾತಿ ನೀಡುವ ಎಲ್ಲ ರೈತರಿಗೂ ಡಿಜಿಟಲ್ ಸಾಗುವಳಿ ಪತ್ರ ನೀಡಲಾಗುವುದು. ಕಳೆದ ಕೆಲವು ದಶಕಗಳಿಂದ ಸರ್ಕಾರದ ವಿವಿಧ ಯೋಜನೆಗಳಡಿ ರೈತರಿಗೆ ಜಮೀನು ಮಂಜೂರಾಗಿದೆ. ಆದರೆ ಸೂಕ್ತ ದಾಖಲೆಗಳನ್ನು ನೀಡಿಲ್ಲ. ಇದರಿಂದ ಪೋಡಿಯಾಗದೆ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈಗ ಜಮೀನಿಗೆ ಹಕ್ಕುಪತ್ರ ನೀಡುವ ಜೊತೆಗೆ ತಹಶೀಲ್ದಾರ್ ಅವರೇ ನೋಂದಣಿ ಮಾಡಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
1.26 ಲಕ್ಷ ಬಗರ್ ಹುಕುಂ ಸಾಗುವಳಿ ರೈತರ ಅರ್ಜಿಗಳನ್ನು ಮಾನ್ಯ ಮಾಡಲಾಗಿದ್ದು, ಈ ತಿಂಗಳಲ್ಲಿ 5000 ಮಂದಿಗೆ ಡಿಜಿಟಲ್ ಸಾಗುವಳಿ ಪತ್ರ ನೀಡಲಾಗುವುದು. ಜನವರಿಗೆ 20,000 ರೈತರಿಗೆ, 6 ತಿಂಗಳಲ್ಲಿ ಎಲ್ಲಾ ರೈತರಿಗೆ ಡಿಜಿಟಲ್ ಸಾಗುವಳಿ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.