ಬೆಂಗಳೂರು: ವಿಕಾಸಸೌಧದಲ್ಲಿರುವ ನೀರಾವರಿ ಇಲಾಖೆ ಕಚೇರಿಯ ಸಲಕರಣೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಕಲಬುರಗಿ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿರಾವರಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ಚೇರ್ ಸೇರಿದಂತೆ ಹಲವು ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ.
ಹೊಸ ಕೆರೆ ನಿರ್ಮಾಣಕ್ಕೆ ಆಳಂದ ತಾಲೂಕಿನ ಕೊತರಹಿಪ್ಪರಗಿ ಗ್ರಾಮದಲ್ಲಿನ ರೈತರ ಜಮೀನನ್ನು ನೀರಾವರಿ ಇಲಾಖೆ ಭೂ ಸ್ವಾಧೀನ ಮಾಡಿಕೊಂಡಿತ್ತು. ಆದರೆ ರೈತರಿಗೆ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲಿ ನೊಂದ ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಕಲಬುರಗಿ ಜಿಲ್ಲಾ ನ್ಯಾಯಾಲಯ, ಕೊಪ್ಪಳ ನ್ಯಾಯಾಲಯ, ವಿಜಯಪುರ ಕೋರ್ಟ್ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಎಲ್ಲಾ ಕೋರ್ಟ್ ಗಳ ಆದೇಶವಿದ್ದರೂ ರೈತರಿಗೆ ಪರಿಹಾರ ನೀಡದೇ ಇಲಾಖೆ ಬೇಜವಾಬ್ದಾರಿ ಮೆರೆದಿತ್ತು.
ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 8 ವರ್ಷಗಳ ಹಿಂದೆ ಅಲ್ಪ ಪ್ರಮಾಣದ ಪರಿಹಾರವನ್ನು ನೀಡಿ ನೀರಾವರಿ ಇಲಾಖೆ ಸುಮ್ಮನಾಗಿತ್ತು. ಇದನ್ನು ಪ್ರಶ್ನಿಸಿದ್ದ ರೈತರು ಮತ್ತೆ ಕಲಬುರಗಿ ಕೋರ್ಟ್ ಮೆಟ್ಟಿಲೇರಿದ್ದರು. ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ಸೂಕ್ತ ಪರಿಹಾರ ನೀಡದ ಕಾರಣ ವಿಕಾಸಸೌಧದಲ್ಲಿರುವ ನೀರಾವರಿ ಕಚೇರಿಯ ಸಲಕರಣೆಗಳನ್ನು ಜಪ್ತಿ ಮಾಡಿ ಅದರಲ್ಲಿ ಬಂದ ಹಣದಿಂದ ಪರಿಹಾರ ಪಾವತಿಸುವಂತೆ ಆದೇಶ ನೀಡಿತ್ತು. ಈ
ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ವಾರೆಂಟ್ ಪಡೆದು ನೀರಾವರಿ ಕಚೇರಿಯಲ್ಲಿನ 13 ಚೇರ್, 4 ಕಂಪ್ಯೂಟರ್, 4 ಜೆರಾಕ್ಸ್ ಮಶಿನ್ ಸೇರಿದಂತೆ ಹಲವು ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.