ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಳ ಬೇಗುದಿ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕುಳಿತಿದ್ದಾರೆ. ಫೆವಿಕಾಲ್ ಕಿತ್ತಿಕೊಳ್ಳಲು ಡಿಸಿಎಂ ಪ್ರಯತ್ನಿಸುತ್ತಿದ್ದಾರೆ. ಎಲ್ಲವನ್ನು ಇವರಿಬ್ಬರೇ ಮಾಡಿದರೆ ನಮ್ಮದೇನು ಪಾತ್ರ ಅಂತ ಗೃಹ ಸಚಿವ ಪರಮೇಶ್ವರ್ ಗೆ ಪ್ರಶ್ನೆ ಬಂದಿದೆ. ಬರುವ ದಿನಗಳಲ್ಲಿ ಇದು ದೊಡ್ಡ ಸ್ವರೂಪ ಪಡೆಯುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಈ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂದು ಭವಿಷ್ಯ ನುಡಿದರು. ಹಾಸನದಲ್ಲಿ ನಡೆದ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶ, ಕೋರ್ಟ್ ನಲ್ಲಿ ನಡೆಯುತ್ತಿರುವ ಕೇಸ್ ಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಮಾಡಲಾಗಿದೆ. ಯಾವ ಪುರುಷಾರ್ಥಕ್ಕೆ ಹಾಸನದಲ್ಲಿ ಸಮಾವೇಶ ಮಾಡಿದರು? ಜನಕಲ್ಯಾಣ ಮಾಡಲಿ ಅಂತ ಅವರಿಗೆ ಜನ ಅಧಿಕಾರ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನವರು ಜನಕಲ್ಯಾಣ ಮರೆತು ಸಮಾವೇಶದಲ್ಲಿ ಮುಳುಗಿದ್ದಾರೆ. ರಾಜ್ಯದ ಹಣಕಾಸನ್ನು ಇವರು ದಿವಾಳಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅಭಿವೃದ್ಧಿಯಲ್ಲಿ ಜೀರೋ, ಸಾಮಾಜಿಕ ನ್ಯಾಯಾಲಯದಲ್ಲಿ ಜೀರೋ, ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಜೀರೋ. ಹಣಕಾಸು ವ್ಯವಸ್ಥೆಯಲ್ಲಿ ಜೀರೋ, ರಾಜ್ಯದಲ್ಲಿ ಇರುವುದು ಜೀರೋ ಸರ್ಕಾರ. ಹೆಜ್ಜೆ ಹೆಜ್ಜೆಗೂ ಹಗರಣಗಳನ್ನು ಮಾಡುತ್ತಿದೆ. ಕೋರ್ಟ್ ನಲ್ಲಿ ನಡೆಯುತ್ತಿರುವ ಕೇಸ್ ಮೇಲೆ ಪ್ರಭಾವ ಬೀರಲು ಸಮಾವೇಶ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವಕ್ಫ್ ವಿರುದ್ಧ ಬಿಜೆಪಿ ಹೋರಾಟ ನಾಟಕ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸಿಎಂ ದೊಡ್ಡಾಟದ ಪ್ರಮುಖ ಪಾತ್ರಧಾರಿ, ವಿಪಕ್ಷವಾಗಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಕೆಲಸ. ಸಿಎಂಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ ಎಂದು ಟಾಂಗ್ ನೀಡಿದರು.
ಸರ್ಕಾರಿ ದುಡ್ಡಿನಲ್ಲಿ ಸಮಾವೇಶ ಮಾಡಿದ್ದಾರೆ. ಅದೇ ದುಡ್ಡನ್ನು ಅಭಿವೃದ್ಧಿಗೆ ಬಳಕೆ ಮಾಡಬಹುದಿತ್ತು. ಸಮಾವೇಶ ಮಾಡಿಕೊಳ್ಳುವ ಮೂಲಕ ಸಿಎಂ ತಮಗೆ ಆನೆ ಬಲ ತುಂಬಿಕೊಳ್ಳುವುದಲ್ಲ. ಜನರಿಗೆ ಆನೆ ಬಲ ತುಂಬುವ ಕೆಲಸ ಆಗಬೇಕಿದೆ. ಅಸ್ಥಿರತೆಯಲ್ಲಿ ಸಿಎಂ ಸಿದ್ದರಾಮಯ್ಯ ಕಾಲ ದೂಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.