ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿತಪ್ಪಿ ಪರದಾಡುವ ಪ್ರಕರಣ ಹೆಚ್ಚುತ್ತಿದೆ. ರಸ್ತೆ ಮಾರ್ಗ ತಿಳಿಯಲೆಂದು ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದ ಕುಟುಂಬ ದಟ್ಟಾರಣ್ಯದೊಳಗೆ ಸಿಲುಕಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.
ಬಿಹಾರದ ರಾಜದಾಸ್ ರಣಜಿತ್ ದಾಸ್ ಕುಟುಂಬ ಉಜ್ಜಯಿನಿಯಿಂದ ಗೋವಾ ಪ್ರವಾಸಕ್ಕೆಂದು ತೆರಳುತ್ತಿದ್ದರು. ಗೂಗಲ್ ಮ್ಯಾಪ್ ಮೂಲಕ ಗೋವಾಕ್ಕೆ ತಾವು ತಲುಪಬೇಕಿದ್ದ ಸ್ಥಳದ ಲೊಕೇಶನ್ ಹಾಕಿ ಪ್ರಯಾಣಿ ಆರಂಭಿಸಿದ ರಾಜದಾಸ್ ಕುಟುಂಬಕ್ಕೆ ಮಾರ್ಗ ತಪ್ಪಿದೆ.
ಗೂಗಲ್ ಮ್ಯಾಪ್ ತೋರಿಸಿದಂತೆ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ಭೀಮಗಡ ವನ್ಯಧಾಮದ ಅರಣ್ಯದೊಳಗೆ ಹೊಕ್ಕಿದ್ದಾರೆ. ಅಷ್ಟೊತ್ತಿಗೆ ನೆಟ್ ವರ್ಕ್ ಸ್ಥಗಿತಗೊಂಡಿದೆಯಲ್ಲದೇ ರಾತ್ರಿಯಾಗಿದೆ. ಕಗ್ಗತ್ತಲಿನಲ್ಲಿ ಕಾಡಿನಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡಾ ಸಿಗದೇ ಇಡೀ ಕುಟುಂಬ ಪರದಾಡಿದೆ.
ರಾತ್ರಿಯಿಡಿ ಅರಣ್ಯದಲ್ಲಿಯೇ ರಾಜದಾಸ್ ಕುಟುಂಬ ಕಾಲ ಕಳೆದಿದೆ. ಬೆಳಗಾಗುತ್ತಿದ್ದಂತೆ ತಾವಿದ್ದ ಸ್ಥಳದಿಂದ ಮೂರ್ನಾಲ್ಕು ಕಿಲೋಮೀಟರ್ ಕ್ರಮಿಸಿದ್ದಾರೆ. ಬಳಿಕ , ಮೊಬೈಲ್ ನೆಟ್ವರ್ಕ್ ಸಿಗುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ತಕ್ಷಣ ಖಾನಾಪುರ ಠಾಣೆ ಪೊಲೀಸರು ರಾಜದಾಸ್ ಕುಟುಂಬ ಇರುವ ಸ್ಥಕ್ಕಾಗಮಿಸಿ ಅವರಿಗೆ ನೆರವಾಗಿದ್ದಾರೆ.