ಬಾಗಲಕೋಟೆ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವೃದ್ಧರೊಬ್ಬರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಸಹ ಪ್ರಯಾಣಿಕರಾಗಿದ್ದ ವೈದ್ಯರೊಬ್ಬರು ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.
ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಗ್ರಾಮದ ಶೇಖರಪ್ಪ ಹಂಸನೂರ(70) ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ವೈದ್ಯ ಡಾ. ಪರುಶುರಾಮ ದಾನಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪರಶುರಾಮ ದಾನಿ ಬಸ್ ನಲ್ಲಿ ಇಳಕಲ್ ನಿಂದ ಗುಳೇದಗುಡ್ಡಕ್ಕೆ ಪ್ರಯಾಣಿಸುತ್ತಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಶೇಖರಪ್ಪ ವಾಂತಿ ಬಂದಿದ್ದರಿಂದ ಕಿಟಕಿ ತೆರೆಯುವಂತೆ ಹೇಳಿದ್ದಾರೆ. ವಾಂತಿ ಮಾಡಿದ ತಕ್ಷಣವೇ ವೈದ್ಯರ ಭುಜದ ಮೇಲೆ ಒರಗಿ ಬೆವರತೊಡಗಿದ್ದಾರೆ.
ವೈದ್ಯರು ಪರೀಕ್ಷಿಸಿದಾಗ ಪಲ್ಸ್ ನಿಂತಿರುವುದು ಕೂಡ ಗೊತ್ತಾಗಿದೆ. ಕೂಡಲೇ ಸಿಪಿಆರ್ ಚಿಕಿತ್ಸೆ ನೀಡಿದ್ದು, ಆರಂಭದಲ್ಲಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಪ್ರಯತ್ನ ತೀವ್ರಗೊಳಿಸಿದ್ದಾರೆ. ಸತತ ಪ್ರಯತ್ನದ ನಂತರ ಶೇಖರಪ್ಪ ಕಣ್ಣು ಬಿಟ್ಟು ಉಸಿರಾಡಿದ್ದಾರೆ. ಸಮಯೋಚಿತವಾಗಿ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಶೇಖರಪ್ಪ ಬದುಕುಳಿದಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರು, ನಿರ್ವಾಹಕ ಅವರಿಗೆ ಸಾಥ್ ನೀಡಿದ್ದಾರೆ. ವೃದ್ಧ ಶೇಖರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.