ವರ್ಜೀನಿಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಕಣ್ಮರೆಗೆ ಸಂಬಂಧಿಸಿದಂತೆ ಕೊಲೆ ಆರೋಪವನ್ನು ಎದುರಿಸುತ್ತಿದ್ದಾನೆ. 33 ವರ್ಷದ ನರೇಶ್ ಭಟ್, ನೇಪಾಳ ಮೂಲದ ತನ್ನ ಪತ್ನಿ 28 ವರ್ಷದ ಮಮತಾ ಕಫ್ಲೆ ಭಟ್ ಅವರನ್ನು ಕೊಂದ ಆರೋಪಿ.
“ಸಂಗಾತಿಯ ಮರಣದ ನಂತರ ನೀವು ಎಷ್ಟು ಬೇಗನೆ ಮರುಮದುವೆಯಾಗಬಹುದು” ಎಂದು ನರೇಶ್ ಗೂಗಲ್ ನಲ್ಲಿ ಹುಡುಕಿದ್ದ ಎನ್ನಲಾಗಿದೆ. ಅಲ್ಲದೇ ಮಮತಾ ನಾಪತ್ತೆಯಾದ ಸ್ವಲ್ಪ ಸಮಯದ ನಂತರ ಅನುಮಾನಾಸ್ಪದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ ಎಂದು ಪ್ರಾಸಿಕ್ಯೂಟರ್‌ಗಳು ಬಹಿರಂಗಪಡಿಸಿದ್ದಾರೆ.
ನ್ಯಾಯಾಲಯದ ದಾಖಲೆಗಳಲ್ಲಿ ನರೇಶ್ ಭಟ್ ವಿರುದ್ಧ ಪ್ರಿನ್ಸ್ ವಿಲಿಯಂ ಕೌಂಟಿ ಸರ್ಕ್ಯೂಟ್ ಕೋರ್ಟ್‌ನಲ್ಲಿ ಎರಡು ಅಪರಾಧಗಳನ್ನು ಆರೋಪಿಸಲಾಗಿದೆ. ಅವರ ಪತ್ನಿ ಮಮತಾ ಜುಲೈ 29 ರಂದು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು, ಆದರೆ ಅವರ ಶವ ಈವರೆಗೂ ಪತ್ತೆಯಾಗಿಲ್ಲ.
ಮಮತಾ ಕಣ್ಮರೆಯಾದ ನಂತರದ ದಿನಗಳಲ್ಲಿ ಅನುಮಾನಾಸ್ಪದ ಖರೀದಿಗಳು ಮತ್ತು ಆನ್‌ಲೈನ್ ಹುಡುಕಾಟಗಳು ಸೇರಿದಂತೆ ಕೆಲ ಸಾಕ್ಷ್ಯಗಳು ಲಭಿಸಿದ ನಂತರ ಮಾನಸಾಸ್ ಪಾರ್ಕ್‌ನ ನಿವಾಸಿ ನರೇಶ್ ಭಟ್ ಅವರ ಮೇಲೆ ಕೊಲೆ ಮತ್ತು ದೇಹವನ್ನು ಕಣ್ಮರೆಗೊಳಿಸಿದ ಆರೋಪದ ಮೇಲೆ ವರ್ಜೀನಿಯಾ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಮಾಡಿದೆ.